ಅಂತರ ಬೆಳೆ ಬೇಸಾಯವು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಏಕಬೆಳೆಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಸಮರ್ಥನೀಯ ಕೃಷಿ ವಿಧಾನವಾಗಿದೆ ಭೂ ಬಳಕೆ ಮತ್ತು ಸಂಪನ್ಮೂಲಗಳನ್ನು ಉತ್ತಮಗೊಳಿಸುವ ಮೂಲಕ ಪರಿಸರ ಆರೋಗ್ಯವನ್ನು ಉತ್ತೇಜಿಸುವ ಜೊತೆಗೆ ಅಂತರ ಬೆಳೆಗಳು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಪ್ರಸ್ತುತ ಕಾಲಘಟ್ಟದಲ್ಲಿ ಅಂತರ ಬೆಳೆಗಳನ್ನು ಬೆಳೆಯುವುದು ಅತ್ಯಂತ ಅವಶ್ಯಕತೆಯಾಗಿರುತ್ತದೆ. ಇದಕ್ಕೆ ಹಲವಾರು ಕಾರಣಗಳನ್ನು ಕೊಡಬಹುದು.
1. ಜಾಗತೀಕರಣ ನಗರೀಕರಣ ಮತ್ತು ಕೈಗಾರಿಕರಣಗಳಿಂದಾಗಿ ಯೋಗ್ಯ ಕೃಷಿಭೂಮಿ ಲಭ್ಯತೆ ಕಡಿಮೆಯಾಗಿರುತ್ತಿರುವುದರಿಂದ ಲಭ್ಯವಿರುವ ಯೋಗ್ಯ ಕೃಷಿಭೂಮಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸಲಹೆಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿರುವುದು.
2. ಅತೀಯಾದ ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸಿ ಇಂದು ನಾವು ತಿನ್ನುವ ಪ್ರತಿ ಆಹಾರದಲ್ಲೂ ಹಲವಾರು ರಸಾಯನಿಕ ಅಂಶಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಗರಿಷ್ಟ ಅನುಮತಿಸುವ ಮಿತಿಯನ್ನು ಮೀರಿ ಕಂಡುಬರುತ್ತಿರುವುದು ನಾವು ಅಂತರ ಬೆಳೆಗಳನ್ನು ಬೆಳೆಯುವುದರಿಂದ ರಾಸಯನಿಕ ಬಳಕೆಯನ್ನು ಆಯಾ ಬೆಳೆಗಳಿಗೆ ಸಂಯೋಜಿಸಿಕೊಂಡು ಉಪಯೋಗಿಸಬೇಕಾದ ಕಾರಣ ಈ ವಿಧಾನವು ಅತಿ ಹೆಚ್ಚಿನ ರಾಸಾಯನಿಕಗಳ ಬಳಕೆಯನ್ನು ತಡೆಯುತ್ತದೆ.
3. ಮಿತಿ ಮೀರಿದ ಕೃಷಿ ವೆಚ್ಚಗಳಿಂದಾಗಿ ರೈತರಿಗೆ ನಿವ್ಹಳ ಆದಾಯ ಕಡಿಮೆಯಾಗುತ್ತಿರುತ್ತದೆ. ಅಂತರ ಬೆಳೆಗಳನ್ನು ಬೆಳೆಯುವ ಪ್ರಮುಖ ಪ್ರಯೋಜನಗಳು ಕೆಳಕಂಡಂತೆ ಇರುತ್ತವೆ.
ಹೆಚ್ಚಿನ ಲಾಭದಾಯಕತೆ : ಮಾದ್ಯಮಿಕ ಬೆಳೆಗಳು ಹೆಚ್ಚುವರಿ ಆದಾಯವನ್ನು ಉತ್ಪಾದಿಸುತ್ತವೆ ಮತ್ತು ರ್ಥಿಕ ಸುರಕ್ಷತಾ ಜಾಲವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಾಥಮಿಕ ಬೆಳೆ ವಿಫಲವಾದರೂ ಆದಾಯವನ್ನು ಖಾತ್ರಿಪಡಿಸುತ್ತದೆ.
ಸಮರ್ಥ ಭೂ ಬಳಕೆ : ಸಾಲುಗಳ ನಡುವೆ ಪೂರಕ ಜಾತಿಗಳನ್ನು ನೆಡುವುದು ಮಣ್ಣಿನ ಬಳಕೆಯನ್ನು ಗರಿಷ್ಟಗೊಳಿಸುತ್ತದೆ. ಏಕ ಬೆಳೆ ಕೃಷಿಯಲ್ಲಿ ಸಾಲುಗಳ ನಡುವಿನ ಅಂತರ ಸಾಮಾನ್ಯವಾಗಿ ಬಳಕೆಯಾಗದೆ ಉಳಿಯುತ್ತದೆ.

ನಗದು ಬೆಳೆಗಳಿಗೆ ರಕ್ಷಣೆ: ಅಂತರ ಬೆಳೆ ಬೇಸಾಯವು ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಪ್ರಯೋಜನಕಾರಿ ಕೀಟಗಳನ್ನು ಆಕರ್ಷಿಸುತ್ತದೆ ಮತ್ತು ಬಲವಾದ ಗಾಳಿ ಅಥವಾ ಅತಿಯಾದ ಸೂರ್ಯನ ಬೆಳಕಿನಂತಹ ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಬೆಳೆಗಳನ್ನು ರಕ್ಷಿಸುತ್ತದೆ. ಇದು ರಾಸಾಯನಿಕ ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಬೆಳೆಗಳನ್ನು ಸಂರಕ್ಷಿಸುವ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಮಣ್ಣಿನ ಸವೆತ ತಡೆಗಟ್ಟುವಿಕೆ: ಸಾಲುಗಳ ನಡುವೆ ಬೆಳೆದ ಅಂತರ ಬೆಳೆ ಸಸ್ಯಗಳ ಬೇರುಗಳ ಮಣ್ಣನ್ನು ಸ್ಥಿರಗೊಳಿಸಲು ಮತ್ತು ಸವೆತವನ್ನು ತಡೆಯಲು ಸಹಾಯ ಮಾಡುತ್ತದೆ.
ವರ್ಧಿತ ಮಣ್ಣಿನ ಫಲವತ್ತತೆ:- ದ್ವಿದಳ ಧಾನ್ಯಗಳು ಮತ್ತು ಸೊಪ್ಪುಗಳನ್ನು ಪ್ರಮುಖ ಬೆಳೆಗಳೊಂದಿಗೆ ಬೆಳೆಯುವುದರಿಂದ ಸಾರಜನಕ ಸ್ಥಿರೀಕರಣದ ಮೂಲಕ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ನೆರೆಯ ಸಸ್ಯಗಳಿಗೆ ಮಣ್ಣನ್ನು ಸಮೃದ್ದಗೊಳಿಸುತ್ತದೆ.
ಕಡಿಮೆಯಾದ ರಸಗೊಬ್ಬರ ಅವಲಂಬನೆ:- ನೈಸರ್ಗಿಕವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿನ ಅಂತರಬೆಳೆ ಬೆಳೆಗಳು ಸಂಶ್ಲೇಷಿತ ರಸಗೊಬ್ಬರ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಪರಿಸರದ ಪ್ರಭಾವವನ್ನು ಕಡಿಮೆ ಮಾಡುತ್ತದೆ.
ಉತ್ತಮ ಸಂಪನ್ಮೂಲ ಬಳಕೆ: ನೀರು, ಸೂರ್ಯನ ಬೆಳಕು ಮತ್ತು ಇತರೆ ನೈಸರ್ಗಿಕ ಸಂಪನ್ಮೂಲಗಳನ್ನು ಬೆಳೆಗಳ ನಡುವೆ ಹಂಚಿಕೆಯಾಗುತ್ತವೆ ಹೆಚ್ಚು ಪರಿಣಾಮಕಾರಿ ಬಳಕೆಯನ್ನು ಖಚಿತ ಪಡಿಸುತ್ತದೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ.
ಕಳೆ ನಿಗ್ರಹ: ಸಾಲುಗಳ ನಡುವಿನ ಖಾಲಿ ಜಾಗಗಳು ಕಳೆಗಳಿಗಿಂತ ಪ್ರಯೋಜನಕಾರಿ ಸಸ್ಯಗಳಿಂದ ತುಂಬಿರುತ್ತದೆ, ನೈಸರ್ಗಿಕವಾಗಿ ಕಳೆ ನಿಯಂತ್ರಣವನ್ನು ಸುಧಾರಿಸುತ್ತದೆ.
ವರ್ಧಿತ ಜೀವ ವೈವಿಧ್ಯ: ವಿವಿಧ ಜಾತಿಗೆ ಸೇರಿದ ಬೆಳೆಗಳನ್ನು ಒಟ್ಟಿಗೆ ಬೆಳೆಸುವುದರಿಂದ ಜೀವ ವೈವಿಧ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಪರಿಸರ ಸ್ಥಿರತೆಗೆ ಕೊಡುಗೆ ನೀಡುತ್ತದೆ. ಪರಿಸರ ಮತ್ತು ಧೀರ್ಘಕಾಲೀನ ಕೃಷಿ ಸಮರ್ಥನೀಯತೆಗೆ ಪ್ರಯೋಜನವನ್ನು ನೀಡುತ್ತದೆ.
ಕೃಷಿ ಕೂಲಿಕರ ಸಮರ್ಥ ಬಳಕೆ: ವಿವಿಧ ಬೆಳೆಗಳನ್ನು ಒಟ್ಟಿಗೆ ಬೆಳೆದಾಗ ಲಭ್ಯವಿರುವ ಕೃಷಿ ಕೂಲಿಕರಿಗೆ ಸಮರ್ಥವಾಗಿ ಬಳಕೆ ಮಾಡಿ ಕೃಷಿ ವೆಚ್ಚವನ್ನು ತಗ್ಗಿಸಬಹುದಾಗಿರುತ್ತದೆ.
ಅಂತರ ಬೆಳೆಗಳನ್ನು ಬೆಳೆಯುವ ಮೂಲಕ ಹಲವು ಪ್ರಯೋಜನೆಗಳನ್ನು ಪಡೆಯಬಹುದು ಎಂದು ತಿಳಿದುಕೊಂಡ ನಾವು ಯಾವ ಪ್ರಮುಖ ಬೆಳೆಗಳಿಗೆ ಯಾವ ತರಹದ ಅಂತರ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನುತಿಳಿದುಕೊಳ್ಳೊಣ.
ಮುಖ್ಯ ಬೆಳೆಯ ಅಂತರ : ಬೆಳೆಗಳನ್ನು ಬೆಳೆಯ ಬೇಕಾದಾಗ ಅಂತರ ಅತಿ ಹೆಚ್ಚಿನ ಮಹತ್ವವನ್ನು ವಹಿಸುತ್ತದೆ. ಈ ಅಂತರವು ಉಳುಮೆ ಯಂತ್ರೋಪಕರಣಗಳ ಚಲನೆಗೆ ಅವಕಾಶ ಕೊಡಬೇಕಾಗಿರುತ್ತದೆ. ಹಾಗಾಗಿ ಮುಖ್ಯ ಬೆಳೆಯ ಜೊತೆ ಅಂತರ ಬೆಳೆಗಳನ್ನು ಯಾವ ಅಂತರದಲ್ಲಿ ಬೆಳೆಯಬೇಕು ಎಂಬುದನ್ನು ನಿರ್ಧರಿಸುವುದು ಬಹಳ ಮುಖ್ಯವಾಗಿರುತ್ತದೆ.
ನೀರಿನ ಲಭ್ಯತೆ: ಯಾವುದೇ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಾಗ ನೀರಿನ ಲಭ್ಯತೆ ಪ್ರಮುಖ ಅಂಶವಾಗಿರುತ್ತದೆ ಹಾಗಾಗಿ ಮುಖ್ಯ ಬೆಳೆಗೆ ಅಂತರ ಬೆಳೆಗಳನ್ನು ನಿರ್ಧರಿಸುವಾಗ ನೀರಿನ ಲಭ್ಯತೆಯನ್ನು ಪರಿಗಣಿಸುವುದು ಬಹಳ ಮುಖ್ಯ .

ರೋಗ ಕೀಟಗಳ ನಿಯಂತ್ರಣ: ಯಾವುದೇ ಮುಖ್ಯ ಬೆಳೆಗಳಿಗೆ ಅಂತರ ಬೆಳೆಗಳನ್ನು ನಿರ್ಧರಿಸುವಾಗ ಎರಡೂ ಬೆಳೆಗಳ ಪ್ರಮುಖ ರೋಗ ಮತ್ತು ಕೀಟಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಸಾಮಾನ್ಯವಾಗಿ ಒಂದೇ ಜಾತಿಯ ಬೆಳೆಗಳಿಗೆ ಒಂದೇ ರೀತಿಯ ರೋಗ ಮತ್ತು ಕೀಟಗಳು ಬಾವಿಸುವುದು ಸರ್ವೇ ಸಾಮಾನ್ಯ ಹಾಗಾಗಿ ಒಂದೇ ಜಾತಿಯ ಗಿಡಗಳನ್ನು ಮುಖ್ಯ ಬೆಳೆ ಮತ್ತು ಅಂತರ ಬೆಳೆಗಳಾಗಿ ಬೆಳೆಯಬಾರದು.
ಪೋಷಕಾಂಶಗಳ ನಿರ್ವಹಣೆ:- ಸಾಮಾನ್ಯವಾಗಿ ಯಾವುದೇ ಅಂತರ ಬೆಳೆಗಳನ್ನು ಬೆಳೆದಾಗ ಪೋಷಕಾಂಶಗಳ ಅವಶ್ಯಕತೆ ಮತ್ತು ಅದಕ್ಕೆ ತಗಲುವ ವೆಚ್ಚ ಕೇವಲ ಏಕ ಬೆಳೆಯನ್ನು ಬೆಳೆಯುವುದಕ್ಕಿಂತಲೂ ಹೆಚ್ಚು ಹಾಗಾಗಿ ಅಂತರ ಬೆಳೆಗಳನ್ನು ಬೆಳೆಯುವಾಗ ಅಗತ್ಯ ಪೋಷಕಾಂಶಗಳ ನಿರ್ವಹಣೆ ಬಹಳ ಮುಖ್ಯ.
ಸೂರ್ಯಕಿರಣಗಳ ಲಭ್ಯತೆ : ಯಾವುದೇ ಅಂತರ ಬೆಳೆಗಳನ್ನು ಬೆಳೆಯ ಬೇಕಾದಾಗ ಮುಖ್ಯ ಬೆಳೆಯ ಅಂತರ ಮತ್ತು ಅದರ ಮೇಲಾವರಣಾ ಅಂಶಗಳ ಮೇಲೆ ಸೂರ್ಯನ ಬೆಳಕು ಅಥವಾ ಸೂರ್ಯನ ಕಿರಣಗಳು ಅಂತರ ಬೆಳೆಗಳಿಗೆ ಲಭ್ಯವಾಗುತ್ತದೆ. ಆದ್ದರಿಂದ ಎಷ್ಟು ಪ್ರಮಾಣದಲ್ಲಿ ಸೂರ್ಯನ ಬೆಳಕು ಲಭ್ಯವಿದೆ ಎಂದು ನಿರ್ಣಯಿಸಿ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ನಿರ್ಧರಿಸ ಬಹುದಾಗಿರುತ್ತದೆ.
ಉದಾಹರಣೆಗೆ: ಮುಖ್ಯ ಬೆಳೆಯ ಅಂತರ ಹೆಚ್ಚು ಇದ್ದು ಬೆಳೆಯ ಮೇಲಾವರಣಾ ಕಡಿಮೆ ಇದ್ದಲ್ಲಿ ಸೂರ್ಯನ ಕಿರಣಗಳ ಲಭ್ಯತೆ ಜಾಸ್ತಿ ಇರುತ್ತದೆ. ಆಗ ಹೆಚ್ಚಿನ ಬೆಳಕು ಬಯಸುವ ಬೆಳೆಗಳನ್ನು ಕೂಡ ಅಂತರ ಬೆಳೆಯಾಗಿ ಬೆಳೆಯಬಹುದಾಗಿರುತ್ತದೆ. ಒಂದು ವೇಳೆ ಮುಖ್ಯ ಬೆಳೆಯ ಅಂತರ ಕಡಿಮೆ ಇದ್ದು ಬೆಳೆಯ ಮೇಲಾವರಣಾ ಹೆಚ್ಚು ಇದ್ದಲ್ಲಿ ಕಡಿಮೆ ಸೂರ್ಯನ ಬೆಳಕು ಅಂತರ ಬೆಳೆಗಳಿಗೆ ಲಭ್ಯವಿರುತ್ತದೆ. ಆಗ ಹೆಚ್ಚು ನೆರಳು ಬಯಸುವ ಅಂತರ ಬೆಳೆಗಳನ್ನು ಬೆಳೆಯಬಹುದಾಗಿರುತ್ತದೆ.