ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿನ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ನಡೆಸಿದ ಭಾರತೀಯ ಸೇನೆಗೆ ಶ್ರೇಯಸ್ಸು ಕೋರಿ ರಾಜ್ಯದ ಧಾರ್ಮಿಕ ದತ್ತಿ ನಿಧಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲು ಆದೇಶಿಸಲಾಗಿದೆ.

ಈ ಸಂಬಂಧ ಧಾರ್ಮಿಕ ದತ್ತಿನಿಧಿ ಇಲಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಭಾರತೀಯ ಸೇನೆ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಬೇಕು. ಭಾರತೀಯ ಸೇನೆಗೆ ಒಳಿತಾಗಲಿ, ಸೇನೆಯ ಯೋಧರಿಗೆ ಮತ್ತಷ್ಟು ಶಕ್ತಿಗಾಗಿ ಪ್ರಾರ್ಥಿಸಿ ವಿಶೇಷ ಸಂಕಲ್ಪ ಮಾಡಿ, ಭಗವಂತನ ಪೂಜೆ ಮಾಡಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾಗಿರುವ ರಾಮಲಿಂಗಾರೆಡ್ಡಿ ನಿರ್ದೇಶನದ ಮೇರೆಗೆ ಮುಜರಾಯಿ ಇಲಾಖೆ ಈ ಸುತ್ತೋಲೆ ಹೊರಡಿಸಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಭಾರತೀಯ ಸೇನೆಗೆ ಸಚಿವ ರಾಮಲಿಂಗಾರೆಡ್ಡಿಯವರು ಶುಭಾಶಯ ತಿಳಿಸಿರುವುದನ್ನು ಸುತ್ತೋಲೆಯಲ್ಲಿ ಪ್ರಸ್ತಾಪಿಸಲಾಗಿದೆ. ಭಾರತೀಯ ಸೇನೆ ನಮ್ಮ ಹೆಮ್ಮೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸುತ್ತೋಲೆಯಲ್ಲಿ ಧಾರ್ಮಿಕ ದತ್ತಿ ನಿಧಿ ಇಲಾಖೆ ಆಯುಕ್ತ ಡಾ. ವೆಂಕಟೇಶ್ ಎಂ.ವಿ. ಅವರು ಸೂಚಿಸಿದ್ದಾರೆ. ಈ ಸುತ್ತೋಲೆಯ ಪ್ರತಿಯನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಕಳಿಸಲಾಗಿದೆ.
ಮುಜರಾಯಿ ಇಲಾಖೆ ಸುತ್ತೋಲೆಯಂತೆ, ಇಂದು ಹಲವಾರು ದೇವಸ್ಥಾನಗಳಲ್ಲಿ ಭಾರತೀಯ ಸೇನೆಯ ಹೆಸರಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ ಕಾರ್ಯಕ್ರಮಗಳು ನಡೆಯುತ್ತಿವೆ.