ಹುಬ್ಬಳ್ಳಿ || ಈ ಇಬ್ಬರು ಶಾಸಕರಿಗೆ ಬಿಜೆಪಿ ಹೈಕಮಾಂಡ್ ನೋಟಿಸ್: ಸತ್ಯ ಬಾಯ್ಬಿಟ್ಟ ಜಗದೀಶ್ ಶೆಟ್ಟರ್

ಹುಬ್ಬಳ್ಳಿ || ಈ ಇಬ್ಬರು ಶಾಸಕರಿಗೆ ಬಿಜೆಪಿ ಹೈಕಮಾಂಡ್ ನೋಟಿಸ್: ಸತ್ಯ ಬಾಯ್ಬಿಟ್ಟ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮ ತೆಗೆದುಕೊಂಡಿದ್ದು, ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ವಾಪಸಾತಿ ಮಾಡುವ ಹಾಗಿದ್ದರೆ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು ಎನ್ನುವುದು ನನ್ನ ಆಶಯ. ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರಿಗೂ ನೋಟಿಸ್ ಕೊಟ್ಟಿದ್ದಾರೆ. ಆದಷ್ಟು ಬೇಗ ಕ್ರಮ ಆಗುತ್ತದೆ. ಹೈಕಮಾಂಡ್ ಜಾಣ್ಮೆ ಕ್ರಮಗಳನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತದೆ ಎಂದರು.

ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಉತ್ತಮ ಆಡಳಿತವನ್ನು ಬಿಜೆಪಿ ನೀಡುತ್ತಿದೆ. ಹೀಗಾಗಿ ಇಂತಹ ಸಮಯದಲ್ಲಿ ಎಲ್ಲರೂ ಒಗ್ಗಟ್ಟಿನಲ್ಲಿರಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದರು.

ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರ ಸದ್ದು ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮ್ಮ ಹಿಂದೆ ಇರುವ ಶಾಸಕರು, ಸಚಿವರನ್ನು ಬಿಟ್ಟು ಈ ಬಗ್ಗೆ ಮಾತನಾಡಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಏನು ಮಾತನಾಡುತ್ತಿಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಸುಮ್ಮನೆ ಇದ್ದಾರೆ. ಸಚಿವ ರಾಜಣ್ಣ ಸದನದಲ್ಲಿ ನೇರವಾಗಿ ಮಾತನಾಡಿ ಈಗ ದೂರು ನೀಡುತ್ತಿಲ್ಲ. ದೂರು ನೀಡಲು ತಡ ಮಾಡುತ್ತಿರುವುದು ನೋಡಿದರೆ ಇದರಲ್ಲಿ ರಾಜಣ್ಣ ಅವರದ್ದು ಏನೋ ಇರಬೇಕು ಎಂದು ಅನುಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಒಳಗೆ ಏನೋ ನಡೆಯುತ್ತಿದೆ ಅದನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ. ಹನಿಟ್ರ್ಯಾಪ್ ಸತ್ಯ ಹೊರ ಬಿದ್ದರೆ ರಾಜ್ಯ ಸರ್ಕಾರಕ್ಕೆ ತೊಂದರೆ ಇದೆ. ಹೀಗಾಗಿ ಏನು ಹೊರ ಬರಲ್ಲ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಯುದ್ಧ ನಡೆಯುತ್ತಿದ್ದೆ. ಇದರಲ್ಲಿ ಯಾರು ದರ್ಬಲ ಆಗುತ್ತಾರೋ, ಯಾರು ಸಬಲ ಆಗುತ್ತಾರೋ ಗೊತ್ತಿಲ್ಲ ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ರಾಜ್ಯ ಸರ್ಕಾರ ಸತ್ತು ಹೋಗಿದೆ. ಮರಣೋತ್ತರ ಪರೀಕ್ಷೆ ಮಾಡುವುದು ಮಾತ್ರ ಉಳಿದಿದೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *