ಹುಬ್ಬಳ್ಳಿ: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಪ್ರಯಾಣಿಕರ ಸುರಕ್ಷಿತೆ ಸಹ ಸವಾಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಅತಿ ಹೆಚ್ಚು ದಟ್ಟಣೆ ಇರುವ ರೈಲು ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ರೈಲ್ವೆ ಮುಂದಾಗಿದೆ. ಇನ್ನು ಕೆಲವು ವಿಶೇಷ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ತಡೆಗಟ್ಟುವಲ್ಲಿ ರೈಲ್ವೆ ಇಲಾಖೆ ವಿಫಲವಾಗುತ್ತಿದೆ ಎನ್ನುವ ಆರೋಪವಿದೆ. ಇದೀಗ ಈ ನಿಟ್ಟಿನಲ್ಲಿ ಎಐ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ. ಇದರಲ್ಲಿ ಮತ್ತೊಂದು ವಿಶೇಷವೂ ಇದೆ.

ಇತ್ತೀಚಿಗೆ ಮಹಾಕುಂಭ ಮೇಳದ ವೇಳೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ರೈಲ್ವೆ ಮಂಡಳಿ ದಿಟ್ಟ ಹೆಜ್ಜೆ ಇರಿಸುವುದಕ್ಕೆ ಮುಂದಾಗಿದೆ. ರಶ್ ಆಗುವಂತಹ ವಿಶೇಷ ಸಂದರ್ಭಗಳಲ್ಲಿ ಬರೀ ಮುಂಗಡ ಟಿಕೆಟ್ ಪಡೆದವರನ್ನಷ್ಟೇ ನಿಲ್ದಾಣದ ಒಳಗೆ ಬಿಡಲು ಕ್ರಮ ಕೈಗೊಳ್ಳುವುದು. ಯಾವ್ಯಾವ ನಿಲ್ದಾಣಗಳಲ್ಲಿ ಈ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ವಿಶೇಷ ಸಂದರ್ಭದಲ್ಲಿ ವಿಶೇಷ ರೈಲು ಓಡಿಸಲಾಗುತ್ತದೆ. ಆಗ ಸಹಜವಾಗಿ ದಟ್ಟಣೆ ಹೆಚ್ಚಾಗುತ್ತದೆ. ನಿಂತು ಪ್ರಯಾಣ ಬೆಳೆಸಲು ಜಾಗ ಸಿಗದಂತಾಗಿ ಟಾಯ್ಲೆಟ್ ಬದಿಯಲ್ಲೋ, ಬಾಗಿಲು ಬದಿಯಲ್ಲೋ ಜನರು ಮಲಗಿ ಪ್ರಯಾಣಿಸುತ್ತಾರೆ. ಆಗ ರೈಲ್ವೆ ಏರಿ ಸೀಟು ಹಿಡಿಯಬೇಕೆಂಬ ಉಮೇದಿಯಲ್ಲಿ ಪ್ರಯಾಣಿಕರ ನಡುವೆ ನೂಕು ನುಗ್ಗಾಟ ನಡೆಯುವುದೂ ಮಾಮೂಲು. ಮಹಾಕುಂಭಮೇಳದ ವೇಳೆ ದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತ ಆಗಿರುವುದು ಇದೇ ಕಾರಣಕ್ಕೆ. ಆ ಕಾಲ್ತುಳಿತದ ವೇಳೆ 18 ಜನ ಮೃತಪಟ್ಟಿದ್ದರು. ಈ ಘಟನೆ ರೈಲ್ವೆ ಮಂಡಳಿಯನ್ನು ದಿಟ್ಟ ಹೆಜ್ಜೆ ಇಡುವಂತೆ ಮಾಡಿದೆ.
ದೆಹಲಿ ಘಟನೆ ನಡೆದ ಮರುದಿನದಿಂದ ಕಾಯ್ದಿರಿಸದ (ತತ್ಕಾಲ)ಟಿಕೆಟ್ಗಳನ್ನೆಲ್ಲ ರೈಲ್ವೆ ಇಲಾಖೆ ರದ್ದು ಮಾಡಿತ್ತು. ಮುಂಗಡ ಟಿಕೆಟ್ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಯಿತು. Also Read
ಯಾರು ಟಿಕೆಟ್ ಕಾಯ್ದಿರಿಸಿರುತ್ತಾರೋ ಅವರಿಗಷ್ಟೇ ರೈಲ್ವೆ ನಿಲ್ದಾಣಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಅದೇ ಮಾದರಿಯನ್ನು ವಿಶೇಷ ಸಂದರ್ಭದಲ್ಲಿ ಎಲ್ಲ ಕಡೆ ಅನುಸರಿಸಲು ಮುಂದಾಗಿದೆ. ನೂಕು ನುಗ್ಗಲು ಆಗುವಂತ ನಿಲ್ದಾಣಗಳಲ್ಲಿ ವಿಶೇಷ ಸಂದರ್ಭದಲ್ಲಿ ಕಾಯ್ದಿರಿಸದ (ತತ್ಕಾಲ) ಟಿಕೆಟ್ ರದ್ದು ಮಾಡಿ ಅಡ್ವಾನ್ಸ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕು. ಜತೆಗೆ ಅವರಿಗಷ್ಟೇ ನಿಲ್ದಾಣದೊಳಗೆ ಪ್ರವೇಶ ನೀಡಬೇಕು. ಇದರಿಂದ ನೂಕು ನುಗ್ಗಾಟ ಆಗಲ್ಲ. ಆಗ ಕಾಲ್ತುಳಿತ ಆಗುವ ಸಾಧ್ಯತೆಯೇ ಇರಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಎಐ ತಂತ್ರಜ್ಞಾನ ಮೊರೆಗೆ ಚಿಂತನೆ: ಮುಂದುವರಿದ ಭಾಗವಾಗಿ ಎಐ ತಂತ್ರಜ್ಞಾನ ಬಳಸಿಕೊಳ್ಳುವ ಚಿಂತನೆ ಸಹ ನಡೆದಿದೆ. ಈ ಕುರಿತಂತೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಮಾಹಿತಿ ನೀಡಿದ್ದು, ಎಐ ತಂತ್ರಜ್ಞಾನವನ್ನು ರೈಲ್ವೆಯಲ್ಲಿ ಬಳಕೆ ಮಾಡುವ ಕುರಿತಂತೆ ಕಳೆದ 10 ವರ್ಷಗಳಿಂದಲೂ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿಯೊಂದು ರೈಲು ನಿಲ್ದಾಣದಲ್ಲಿ ಪ್ರವೇಶ ದ್ವಾರ ಹಾಗೂ ನಿರ್ಗಮ ದ್ವಾರ ಇರುತ್ತವೆ. ಯಾವ ದ್ವಾರದ ಮೂಲಕ ಜನ ಪ್ರವೇಶ ಮಾಡುತ್ತಿದ್ದಾರೆ. ಯಾವ ದ್ವಾರದ ಮೂಲಕ ಹೊರ ಹೋಗುತ್ತಿದ್ದಾರೆ ಎಂಬ ಬಗ್ಗೆ ಲೆಕ್ಕಾ ಹಾಕಬಹುದು. ಸಾಮಾನ್ಯವಾಗಿ ಒಂದು ಪ್ಲಾಟ ಫಾರಂ 1500-2000 ಪ್ರಯಾಣಿಕರು ಸೇರುವಷ್ಟು ಇರುತ್ತವೆ. ಇಷ್ಟು ಸಂಖ್ಯೆ ಬಿಟ್ಟು ಪ್ರಯಾಣಿಕರ ಸಂಖ್ಯೆಯ ಮಿತಿಮೀರಿದರೆ ಎಐ ತಂತ್ರಜ್ಞಾನದ ಮೂಲಕ ಸಂಬಂಧಿಸಿದ ಸಿಬ್ಬಂದಿ ಹಾಗೂ ಸಿಸ್ಟಂಗೆ ಅಲರ್ಟ್ ಮೆಸೇಜ್ ಕೊಡುತ್ತದೆ. ಎಚ್ಚರಿಕೆ ಸಂದೇಶ ಬಂದರೆ, ಕೂಡಲೇ ಎಚ್ಚೆತ್ತುಕೊಳ್ಳಬಹುದು. ಆಗ ಮುಂದೆ ಸಂಭವಿಸಬಹುದಾದ ದುರಂತ ಹಾಗೂ ಅವಘಡ ತಪ್ಪಿಸಬಹುದಾಗಿದೆ. ಈಗಾಗಲೇ ಸಿಸಿಟಿವಿ ಪ್ರತಿ ನಿಲ್ದಾಣದಲ್ಲಿ ಇವೆ. ಇದರಿಂದ ತ್ವರಿತವಾಗಿ ಸಮಸ್ಯೆಗೆ ಸ್ಪಂದನೆ ಸಿಬ್ಬಂದಿಯನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡುವುದಕ್ಕೆ ಅನುಕೂಲವಾಗಲಿದೆ. ಇದಕ್ಕೆ ಎಐ ತಂತ್ರಜ್ಞಾನ ಅಳವಡಿಕೆ ಮಾಡಿದರೆ ಇನ್ನೂ ಉತ್ತಮ ರೀತಿಯಲ್ಲಿ ಯಾವುದೇ ಅವಘಡಕ್ಕೆ ಅವಕಾಶ ಇರುವದಿಲ್ಲ ಎಂದು ಅವರು ಮಾಹಿತಿ ನೀಡಿದರು.
ನೈರುತ್ಯ ರೈಲ್ವೆ ವಲಯದಲ್ಲಿ 388 ರೈಲ್ವೆ ನಿಲ್ದಾಣಗಳಿವೆ. ಇವುಗಳನ್ನು ನಾನ್ ಸಬ್ ಅರ್ಬನ್ ಸ್ಟೇಷನ್ (ಎನ್ಎಸ್ಜಿ), ಸಬ್ಅರ್ಬನ್ (ಎಸ್ಜಿ), ಹಾಲ್ಟ್ ಸ್ಟೇಷನ್ (ಎಚ್ಜಿ) ಹೀಗೆ ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ನಾನ್ ಸಬಅರ್ಬನ್ನಲ್ಲಿ ಆದಾಯದ ಆಧಾರದ ಮೇಲೆ ಎನ್ ಸಿ ಜಿ 1 2 3 4 5 6 ಹೀಗೆ ಆರು ವಿಭಾಗಗಳನ್ನಾಗಿ ಮಾಡಲಾಗಿದೆ. 388 ನಿಲ್ದಾಣಗಳ ಪೈಕಿ 271 ನಿಲ್ದಾಣಗಳು ಎನ್ಎಸ್ ಜಿನಲ್ಲೇ ಬರುತ್ತವೆ. ಸಬ್ಅರ್ಬನ್ (ಎಸ್ಜಿ)ನಲ್ಲಿ ಯಾವ ನಿಲ್ದಾಣ ಇಲ್ಲ. ಆದರೆ ಹಾಲ್ಟ್ ಸ್ಟೇಷನ್ (ಎಚ್ಜಿ)ನಲ್ಲಿ ಎಚ್ಜಿ-1, ಎಚ್ಜಿ-2, ಎಚ್ಜಿ-3 ಹೀಗೆ ಮತ್ತೆ 3 ವಿಭಾಗಗಳನ್ನಾಗಿ ಮಾಡಲಾಗಿದ್ದು, ಇಲ್ಲಿ 117 ನಿಲ್ದಾಣಗಳು ಬರುತ್ತವೆ. ಈ ರೀತಿ ಇರುವಾಗ ಅತಿ ಹೆಚ್ಚು ಪ್ರಯಾಣಿಕರ ಆಗಮನ ನಿರ್ಗಮನಕ್ಕೆ ಸಂಬಂಧಿಸಿದಂತೆ ಲೆಕ್ಕ ಹಾಕಿದರೆ ಎನ್ಎಸ್ಜಿ ಗ್ರೂಪ್ನಲ್ಲಿ ಬರುವ ನಿಲ್ದಾಣಗಳ ಸಂಖ್ಯೆಯೇ ಹೆಚ್ಚಾಗಿವೆ. ಬೆಂಗಳೂರು (ಎಸ್ ಬಿಸಿ) 2.48 ಕೋಟಿ, ಮೈಸೂರು- 97.33 ಲಕ್ಷ, ಯಶವಂತಪುರ- 96.21 ಲಕ್ಷ, ಹುಬ್ಬಳ್ಳಿ- 55.48 ಲಕ್ಷ, ಬಂಗಾರ ಪೇಟೆ- 53.58 ಲಕ್ಷ ಪ್ರತಿವರ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಇದರಂತೆ ಹತ್ತಾರು ನಿಲ್ದಾಣಗಳು ಸೇರಿವೆ. ಇನ್ನು ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಬೆಂಗಳೂರು, ಸೇರಿದಂತೆ 2ರಿಂದ 3 ನಿಲ್ದಾಣಗಳಲ್ಲಿ ಅತಿ ಹೆಚ್ಚು ಜನದಟ್ಟಣೆ ಕಂಡು ಬರುತ್ತವೆ ಎಂದು ಡಾ. ಮಂಜುನಾಥ ಕನಮಡಿ ಅವರು ವಿವರಿಸಿದ್ದಾರೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ.