ಕುಣಿಗಲ್ : ಎಡಿಯೂರು ಹೋಬಳಿ ಸಿದ್ದಾಪುರ ಗ್ರಾಮದಲ್ಲಿ ಶಾಲೆ ಮತ್ತು ದೇವಾಲಯಕ್ಕೆ ಮೀಸಲಿಟ್ಟ ಜಾಗದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್ ಅನ್ನು ಪೊಲೀಸರ ಸಹಕಾರದೊಂದಿಗೆ ತಾಲೂಕು ಪಂಚಾಯ್ತಿ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.
ಸಿದ್ದಾಪುರ ಗ್ರಾಮದ ಮಂಜುನಾಥ್ ಎಂಬುವರು ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿದ್ದ ಶೆಡ್ ಅನ್ನು ತಾ.ಪಂ ಕಾರ್ಯನಿರ್ವಾಣಾಧಿಕಾರಿ ಎಸ್.ನಾರಾಯಣ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಎರಡನೆ ಬಾರಿ ತೆರವು : ಈ ಹಿಂದೆ ಇದೇ ಜಾಗದಲ್ಲಿದ್ದ ಅಕ್ರಮ ನಿರ್ಮಾಣದ ಶೆಡ್ ಅನ್ನು ತೆರವುಗೊಳಿಸಲಾಗಿತ್ತು. ಮಂಜುನಾಥ್ ಅವರು ಪುನಃ ಶೆಡ್ ನಿರ್ಮಾಣ ಮಾಡಿದ್ದರು. ಮತ್ತೆ ಈಗ ಎರಡನೆ ಬಾರಿ ಶೆಡ್ ಅನ್ನು ಮಂಗಳವಾರ ಅಧಿಕಾರಿಗಳು ತೆರವುಗೊಳಿಸಿದರು.
ವಾಗ್ವಾದ : ತಾ.ಪಂ ಇಓ ನೇತೃತ್ವದ ಅಧಿಕಾರಿಗಳ ತಂಡವು ಶೆಡ್ ತೆರವುಗೊಳಿಸಲು ಮುಂದಾದಾಗ ಸ್ಥಳದಲ್ಲೇ ಇದ್ದ ಮಂಜುನಾಥ್ ಮತ್ತು ಅವರ ಪತ್ನಿ ಸಂಧ್ಯಾ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಈ ಜಾಗ ನಮ್ಮದು ನಮ್ಮ ಬಳಿ ದಾಖಲೆಗಳು ಇವೆ. ಹಲವು ವರ್ಷಗಳಿಂದ ಶೆಡ್ ನಿರ್ಮಾಣ ಮಾಡಿದ್ದೇವೆ. ಇದಕ್ಕೆ ಗ್ರಾ.ಪಂನಿAದ ಪರವಾನಗಿ ಸಹ ಪಡೆದಿದ್ದೇವೆ. ಹಾಗಾಗಿ ಶೆಡ್ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಅಕ್ರಮ ಶೆಡ್ ತೆರವು ಸಂದರ್ಭ ಸ್ಥಳದಲ್ಲಿದ್ದ ಪಿಡಿಓ ಲತಾದೇವಿ ಮಾತನಾಡಿ, ಈಗಾಗಲೆ ಲೋಕಾಯುಕ್ತದಿಂದ ಸೂಕ್ತ ಕ್ರಮಕ್ಕೆ ನೋಟಿಸ್ ನೀಡಲಾಗಿದೆ. ಹಾಗಾಗಿ ನೀವು ಅಕ್ರಮ ಶೆಡ್ ತೆರವು ಗೊಳಿಸಲೇಬೇಕೆಂದು ಹೇಳಿದರು.
ಛಾಯಾಗ್ರಾಹಕನಿಗೆ ಗಾಯ : ಶೆಡ್ ತೆರವು ದೃಶ್ಯವನ್ನು ಸೆರೆ ಹಿಡಿಯಲು ಕುಣಿಗಲ್ನಿಂದ ಛಾಯಾ ಗ್ರಾಹಕ ಅರುಣ್ಕುಮಾರ್ ರನ್ನು ಅಧಿಕಾರಿಗಳು ಕರೆಸಿದ್ದರು. ವೀಡಿಯೋ ಮಾಡುತ್ತಿದ್ದ ಅರುಣ್ಕುಮಾರ್ಗೆ ಆಕಸ್ಮಿಕವಾಗಿ ಕಬ್ಬಣದ ಕಂಬಿ ಬಿದ್ದು ಕೈಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವೇಳೆ ಗ್ರಾ.ಪಂ ಅಧ್ಯಕ್ಷ ಜಯದೀಪ್, ಗ್ರಾಮಸ್ಥರಾದ ನಾಗೇಶ್, ಸುರೇಶ್ ಮತ್ತಿತರರು ಇದ್ದರು.