ಶಿರಾ: ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಅನ್ನುವ ಪದ ಬಳಕೆ ಮಾಡುವ ಮೂಲಕ ಅವರ ಅವರ ದೇಹದ ಬಣವನ್ನು ಟೀಕೆ ಮಾಡುವ ಮೂಲಕ ಓರ್ವ ರೈತನ ಮಗನಾದ ಅವರನ್ನಷ್ಟೇ ಅಲ್ಲದೆ ಇಡೀ ರೈತ ಸಮುದಾಯದ ಬಣ್ಣವನ್ನು ಟೀಕೆ ಮಾಡಿದಂತಿದೆ. ಈ ಕೂಡಲೇ ಸಚಿವ ಜಮೀರ್ ಅಹಮದ್ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ತಾ. ಜೆಡಿಎಸ್ ಅಧ್ಯಕ್ಷ ಬಿ.ಸತ್ಯಪ್ರಕಾಶ್ ಮಾತನಾಡಿ, ಕೃಷಿ ಕಾಯಕ ಮಾಡುವ ರೈತರ ಬಹುತೇಕ ಬಣ್ಣ ಕಪ್ಪಗೇ ಇರುತ್ತದೆ. ಕುಮಾರಸ್ವಾಮಿ ಈ ದೇಶ ಕಂಡ ಓರ್ವ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಲಿಗೆಯ ಮೇಲೆ ಹಿಡಿತÀವಿರದ ಜಮೀರ್ ಅಹಮದ್ ಹೇಳಿಕೆ ಖಂಡನೀಯ ಎಂದರು.
ರಾಜ್ಯ ಜೆಡಿಎಸ್ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಉಗ್ರೇಶ್ ಮಾತನಾಡಿ, ಈ ಹಿಂದೆ ಇದೇ ಜಮೀರ್ ಅಹಮದ್ ಜೆಡಿಎಸ್ ಪಕ್ಷದಲ್ಲಿದ್ದಾಗ ಈ ಹಿಂದೆ ದರಿದ್ರ ನಾರಾಯಣ ರ್ಯಾಲಿ ಮಾಡಿದಾಗ ದೇವೇಗೌಡರು ಜಮೀರ್ ಪರ ಮತ ಪೆಟ್ಟಿಗೆಯ ಡಬ್ಬ ಹಿಡಿದು ರ್ಯಾಲಿ ನಡೆಸಿದ್ದನ್ನು ಜಮೀರ್ ಮರೆತಿದ್ದಾರೆ. ಜೆಡಿಎಸ್ ಪಕ್ಷದಿಂದ ಅವರು ರಾಜಕೀಯವಾಗಿ ಬೆಳೆಯಲು ಕಾರಣವಾಯಿತು ಎನ್ನುವುದನ್ನು ಮರೆಯಬಾರದು. ಜಮೀರ್ ಅವರು ಹೆಚ್ಡಿಕೆ ವಿರುದ್ಧ ಆಡಿದ ಮಾತುಗಳ ಬಗ್ಗೆ ಜನತೆಯ ಮುಂದೆ ಕ್ಷಮೆ ಯಾಚಿಸಬೇಕು ಎಂದರು.
ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ಜಮೀರ್ ಅಹಮದ್ ಅವರು ತಮ್ಮ ಹಿಂದಿನ ಸ್ಥಿತಿಯನ್ನು ಮರೆತಿದ್ದಾರೆ. ದೇವೇಗೌಡರ ಕುಟುಂಬವು ಜೆಡಿಎಸ್ನ ಲಕ್ಷಾಂತರ ಕಾರ್ಯಕರ್ತರ ಕುಟುಂಬವೂ ಹೌದು. ಇಂತಹ ಕುಟುಂಬವನ್ನು ಕೊಂಡುಕೊಳ್ಳುವ ತಾಕತ್ತು ಜಮೀರ್ ಅಹಮದ್ಗೆ ಇಲ್ಲ. ಹೆಚ್ಡಿಕೆ ಅವರ ವಿರುದ್ಧ ವರ್ಣದ ಟೀಕೆ ಮಾಡುವ ಹಕ್ಕು ಅವರಿಗಿಲ್ಲ ಎಂದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್, ತಾ.ಪಂ. ಮಾಜಿ ಅಧ್ಯಕ್ಷ ರಂಗನಾಥಪ್ಪ, ನಗರಸಭಾ ಸದಸ್ಯ ಅಂಜಿನಪ್ಪ, ರೆಹಮತ್, ಮಹಿಳಾ ಜೆಡಿಎಸ್ ಅಧ್ಯಕ್ಷೆ ರೇಣುಕಮ್ಮ, ಮುಖಂಡರಾದ ಸುನಿಲ್ಕುಮಾರ್, ಹಂದಿಕುಂಟೆ ಚಂದ್ರಶೇಖರ್, ಬೂವನಹಳ್ಳಿ ನಟರಾಜ್, ಶ್ರೀರಂಗ, ಡಾಕ್ಯಾನಾಯ್ಕ, ಜಯಮ್ಮ ಸೇರಿದಂತೆ ಅನೇಕ ಪ್ರಮುಖರು ಇದ್ದರು.