ಬೆಂಗಳೂರು: ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಹೈಕೋರ್ಟ್ ಶುಕ್ರವಾರ ಬಂಧನದಿಂದ ರಕ್ಷಣೆ ನೀಡಿದೆ.
ವಿಡಿಯೋ ಹಂಚಿಕೆ ಆರೋಪದ ಮೇಲೆ ಮಾಜಿ ಶಾಸಕ ಪ್ರೀತಂ ಗೌಡ, ಸೇರಿದಂತೆ ಇತರ ಮೂವರ ವಿರುದ್ಧ ಎಸ್ಐಟಿ ಪ್ರಕರಣ ದಾಖಲಿಸಿತ್ತು. ಪ್ರೀತಂ ಗೌಡ ವಿರುದ್ಧ ಪೆನ್ಡ್ರೈವ್ ಹಂಚಿಕೆ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಅವರ ಇಬ್ಬರ ಆಪ್ತರನ್ನು ಎಸ್ಐಟಿ ಬಂಧಿಸಿದೆ. ಬಂಧನ ಭೀತಿಯಲ್ಲಿ ಪ್ರೀತಂ ಗೌಡ ಅವರು ಬಂಧನದಿಂದ ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರೀತಂ ಗೌಡ ವಿರುದ್ಧದ ತನಿಖೆಗೆ ತಡೆ ನೀಡಲು ನಿರಾಕರಿಸಿದೆ. ಆರೋಪಿಯ ವಿರುದ್ಧ ಎಸ್ಐಟಿ ತನಿಖೆ ಮುಂದುವರಿಸಬಹುದು. ವಿಚಾರಣೆಗೆ ಸಹಕರಿಸುವಂತೆ ಅರ್ಜಿದಾರ ಪ್ರೀತಂ ಗೌಡಗೆ ಹೈಕೋರ್ಟ್ ಸೂಚನೆ ನೀಡಿದೆ.
ಪ್ರಜ್ವಲ್ ರೇವಣ್ಣ ಅವರ ಪೆನ್ಡ್ರೈವ್ ರಿಲೀಸ್ ಮಾಡಿದ್ದು ಯಾರು ಎನ್ನುವುದರ ಬಗ್ಗೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಕೆಲ ಶಂಕಿತರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆದರೆ ಸಂತ್ರಸ್ತ ಮಹಿಳೆಯೊಬ್ಬರು ಖುದ್ದು ಪ್ರಜ್ವಲ್ ರೇವಣ್ಣ, ಪ್ರೀತಂಗೌಡ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ