ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದಲ್ಲಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆ ಮೇಲೆ ಬುಧವಾರ ದಾಳಿ ಮಾಡಿದ್ದ ಇ.ಡಿ ಅಧಿಕಾರಿಗಳು ಬೆಳಗಿನ ಜಾವ 4ರವರೆಗೂ ಮನೆಯಲ್ಲಿ ಪರಿಶೀಲನೆ ನಡೆಸಿ ತೆರಳಿದ್ದಾರೆ. ಇಡಿ ದಾಳಿ ಬೆನ್ನಲ್ಲೇ ಸತೀಶ್ ಸೈಲ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.
ಶಾಸಕ ಸತೀಶ್ ಸೈಲ್ ಮನೆಯಲ್ಲಿ ಅವರ ಅತ್ತೆಯ ಉಪಸ್ಥಿತಿಯಲ್ಲೇ ಇ.ಡಿ ಅಧಿಕಾರಿಗಳು ಶೋಧ ಮಾಡಿದ್ದಾರೆ. 22 ಗಂಟೆಗಳ ಕಾಲ ನಿರಂತರವಾಗಿ ಶೋಧ ಮಾಡಿದ್ದು, ಹಲವು ದಾಖಲೆಗಳ ಸಮೇತ ತೆರಳಿದ್ದಾರೆ.
ಇನ್ನು ಎಷ್ಟೇ ಪ್ರಯತ್ನ ಪಟ್ಟರೂ ಸತೀಶ್ ಸೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ. ಆಪ್ತರು, ಗನ್ ಮ್ಯಾನ್ ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಲಾಗಿದೆ. ಯಾರ ಫೋನ್ ಸಂಪರ್ಕಕ್ಕೂ ಸಿಗದೆ ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡಿದ್ದಾರೆ. ಅಂಗರಕ್ಷಕರನ್ನ ಕರೆದು ಸೈಲ್ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಬೆಳಿಗ್ಗೆಯಿಂದ ಅವರು ನಮಗೆ ಕರೆ ಮಾಡಿಲ್ಲ. ಮಾಧ್ಯಮಗಳಲ್ಲಿ ನೋಡಿ ಬೆಳಿಗ್ಗೆ ಮನೆ ಬಳಿ ಬಂದಿದ್ದೇವೆ. ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದಾರೆ ಅಷ್ಟೇ. ಆ ಬಳಿಕ ನಮಗೆ ಯಾವುದೇ ಕರೆ ಅಥವಾ ಸಂಪರ್ಕ ಮಾಡಿಲ್ಲ ಎಂದು ಇಡಿ ಅಧಿಕಾರಿಗಳಿಗೆ ಸೈಲ್ ಅಂಗರಕ್ಷಕರು ಹೇಳಿದ್ದಾರೆ.
ಅಕ್ರಮ ಅದಿರು ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ಶಾಸಕ ಸತೀಶ್ ಸೈಲ್ಗೆ ನಿನ್ನೆ ಬೆಳಂಬೆಳಿಗ್ಗೆ ಇಡಿ ಅದಿಕಾರಿಗಳು ಶಾಕ್ ಕೊಟ್ಟಿದ್ದರು. ಹೌದು 2010 ರಿಂದ ಇದುವರೆಗೂ ಬೆಂಬಿಡದೆ ಕಾಡುತ್ತಿರುವ ಬೆಲಿಕೇರಿ ಬಂದರಿನ ಮೂಲಕ ಸಾಗಿಸಲಾಗಿರುವ ಅಕ್ರಮ ಅದಿರು ಸಾಗಾಟ ಪ್ರಕರಣದಿಂದ ಸತೀಶ್ ಸೈಲ್ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಸಿಬಿಐ ಹಾಗೂ ಲೋಕಾಯಕ್ತ ತನಿಖೆಯನ್ನ ಎದುರಿಸಿದ್ಧಾರೆ. ಸದ್ಯ ಹೈಕೋರ್ಟ್ನಲ್ಲಿ ಈ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲ್ಲೇ ಇತ್ತ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.
For More Updates Join our WhatsApp Group :




