ಕುಣಿಗಲ್ : ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪ್ರಯಾಣಿಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾದ ರೈಲ್ವೇ ಸಿಬ್ಬಂದಿಯ ಕಾರ್ಯಕ್ಷಮತೆಯು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಸ್ಥಳೀಯ ರೈಲು ನಿಲ್ದಾಣದ ಪಾಯಿಂಟ್ಸ್ಮೆನ್ ಸಿ.ಜಿ. ವೇಣುಗೋಪಾಲ್ ಅವರ ಜನಪರ ಕಾಳಜಿಗೆ ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್, ಉಪಾಧ್ಯಕ್ಷ ಪರಮೇಶ್‌ಸಿಂದOಗಿ, ಕಾರ್ಯದರ್ಶಿ ಸಿ.ನಾಗರಾಜ್, ಜಂಟಿ ಕಾರ್ಯದರ್ಶಿ ರಾಮಾಂಜನೇಯ ಮತ್ತು ನಿರ್ದೇಶಕ ಟಿ.ಆರ್.ರಘು, ನಿಲ್ದಾಣ ವ್ಯವಸ್ಥಾಪಕ ರಾಜೇಶ್ ಕುಮಾರ್ ಅವರ ಸಮಕ್ಷಮದಲ್ಲಿ ವೇಣುಗೋಪಾಲ್ ಅವರನ್ನು ಅಭಿನಂದಿಸಿದರು.
ಘಟನೆ ಹಿನ್ನೆಲೆ : ಬೆಂಗಳೂರಿನ ಕೆ.ಎಸ್.ಆರ್. ಮತ್ತು ಹಾಸನ ನಡುವೆ ಸಂಚರಿಸುವ ಡೆಮು ರೈಲು (06583) ಕುಣಿಗಲ್ ತಾಲೂಕಿನ ಆಲಪ್ಪನಗುಡ್ಡೆ ಬಳಿ ಸಾಗುತ್ತಿದ್ದಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಮೃತೂರಿನ ಅಶೋಕ್ ಕುಮಾರ್ ಅವರು ಬಾಗಿಲ ಬಳಿ ಬಂದಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಈ ವಿಷಯವನ್ನು ಸಾರ್ವಜನಿಕರು ರೈಲು ನಿಲ್ದಾಣ ವ್ಯವಸ್ಥಾಪಕರಾದ ರಾಜೇಶ್ ಕುಮಾರ್ ಅವರಿಗೆ ತಿಳಿಸಿದ್ದು ಅವರು ಕೂಡಲೇ ಪಾಯಿಂಟ್ಸ್ಮೆನ್ ಸಿ.ಜಿ. ವೇಣುಗೋಪಾಲ್ ಅವರನ್ನು ಘಟನೆ ನಡೆದ ಸ್ಥಳಕ್ಕೆ ಕಳಿಸಿಕೊಟ್ಟಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯ ಎಎಸ್‌ಐ ಪ್ರಕಾಶ್ ಅವರೊಂದಿಗೆ ಸ್ಥಳಕ್ಕೆ ತೆರಳಿ ಸುಮಾರು 15 ಅಡಿ ಆಳದ ರೈಲು ಮಾರ್ಗದಿಂದ ಅಶೋಕ್ ಕುಮಾರ್ ಅವರನ್ನು ಮೇಲಕ್ಕೆತ್ತಿಕೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ನಿಲ್ದಾಣ ನಿರ್ವಹಣೆಗೆ ಮೆಚ್ಚುಗೆ : ನಿಲ್ದಾಣದಲ್ಲಿ ಸಂಚರಿಸಿ ಪರಿಶೀಲಿಸಿದ ವೇದಿಕೆ ಅಧ್ಯಕ್ಷ, ಬೆಂಗಳೂರು ವಿಭಾಗದ ರೈಲು ಪ್ರಯಾಣಿಕರ ಸಲಹಾ ಸಮಿತಿ ಸದಸ್ಯ ಕರಣಂ ರಮೇಶ್ ಅವರು ನಿಲ್ದಾಣದಲ್ಲಿ ಸ್ವಚ್ಛತೆ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಾಹನ ನಿಲ್ದಾಣದ ವ್ಯವಸ್ಥೆಗೆ ಒತ್ತಾಯ : ಕುಣಿಗಲ್ ರೈಲ್ವೆ ಮಾರ್ಗದಲ್ಲಿ ಪ್ರತಿ ದಿನ ಹತ್ತಾರು ರೈಲ್ವೆಗಳು ಸಂಚರಿಸುತ್ತಿದ್ದು, ನೂರಾರು ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ರೈಲ್ವೆ ನಿಲ್ದಾಣದಲ್ಲಿ ಸೂಕ್ತ ವಾಹನ ನಿಲುಗಡೆಗೆ ಜಾಗವಿಲ್ಲದೆ, ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಹಾಗಾಗಿ ರೈಲ್ವೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದರು.
ಕಾಯಂ ನಿಲುಗಡೆಗೆ ಆಗ್ರಹ : ಪ್ರತಿದಿನ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಕಾರವಾರಕ್ಕೆ ಸಂಚರಿಸುವ ಪಂಚಗOಗಾ ಎಕ್ಸ್ಪ್ರೆಸ್ ರೈಲು ಕುಣಿಗಲ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಯಾಗುತ್ತಿದೆ. ಇದನ್ನು ಕಾಯಂಗೊಳಿಸಬೇಕೆOದು ಪ್ರಯಾಣಿಕರ ವೇದಿಕೆ ಆಗ್ರಹ ಪಡಿಸಿದೆ.