ಮಂಡ್ಯ : ಮಂಡ್ಯ ಸಂಸದರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕಾರಿನ ವಿಚಾರಕ್ಕೆ ವಾರ್ ಶುರು ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರು ತಮಗೆ ಹೊಸ ಕಾರನ್ನು ನೀಡಿಲ್ಲ ಎಂದು ದೂರಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಚಿವ ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕುಮಾರಸ್ವಾಮಿ ಅವರೇ ಕಾರನ್ನು ನಿರಾಕರಿಸಿದ್ದಾರೆ ಎಂದು ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.
ಈ ಹಿಂದೆ ಸುಮಲತಾ ಅಂಬರೀಷ್ ಅವರು ಮಂಡ್ಯ ಸಂಸದೆಯಾಗಿದ್ದರು. ಈ ವೇಳೆ ಸುಮಲತಾ ಅವರಿಗೆ ಸರ್ಕಾರದಿಂದ ಕಾರನ್ನು ಕೂಡ ನೀಡಲಾಗಿತ್ತು. ಈಗ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಗೆದ್ದು ಸಂಸದರಾಗಿದ್ದಾರೆ. ವಾಡಿಕೆಯಂತೆ ಈ ಹಿಂದೆ ನೀಡಿರುವ ಕಾರನ್ನೇ ಹೊಸ ಸಂಸದರಿಗೂ ನೀಡುತ್ತಾರೆ ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಅವರು ಮಾಜಿ ಸಂಸದೆ ಸುಮಲತಾ ಅವರು ಬಳಸಿದ್ದ ಕಾರನ್ನು ನಿರಾಕರಿಸಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಸುಮಲತಾ ಅಂಬರೀಶ್ ಬಳಸುತ್ತಿದ್ದ ಕಾರು ನನಗೆ ಬೇಡ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದಕ್ಕೆ ನಾವೇನು ಮಾಡಲು ಸಾಧ್ಯ? ಎಂದಿದ್ದಾರೆ. ಸುಮಲತಾ ಅವರು ಬಳಸುತ್ತಿದ್ದ ಕಾರನ್ನು ಕುಮಾರಸ್ವಾಮಿ ಏಕೆ ಬೇಡ ಎಂದಿದ್ದಾರೋ ಗೊತ್ತಿಲ್ಲ. ನಾವೇನು ಕಾರು ಕೊಡೋದಿಲ್ಲ ಎಂದು ಹೇಳಿಲ್ಲ. ಕಾರು ಬೇಡ ಎಂದಿರುವುದು ಅವರೇ ಎಂದು ಚಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.
ಸದ್ಯ ಸಚಿವರಾದ ಮೇಲೆ ನಮಗೆ ಕಾರು ಕೊಡಲು ಒಂದು ವರ್ಷಗಳು ಬೇಕಾಯಿತು. ನಮಗೂ ಕೂಡ ಈ ಹಿಂದಿನ ಸಚಿವರು ಬಳಸುತ್ತಿದ್ದ ಕಾರನ್ನೇ ನೀಡಿದ್ದರು. ನಾನು ಅದನ್ನೇ ಬಳಸುತ್ತಿದ್ದೆ. ಈ ಹಿಂದೆ ನಾನು ಸಂಸದನಾದ ಮೇಲೂ ಅಂಬರೀಶ್ ಅವರು ಬಳಸುತ್ತಿದ್ದ ಕಾರನ್ನೇ ನನಗೆ ಕೊಟ್ಟಿದ್ದರು. ಹಲವು ತಿಂಗಳ ನಂತರವೇ ನನಗೂ ಹೊಸ ಕಾರು ಕೊಟ್ಟಿದ್ದು ಎಂದು ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ನೂತನ ಸಂಸದರಿಗೆ ಹಳೆಯ ಕಾರನ್ನು ಮೊದಲಿಗೆ ನೀಡುವುದು ವಾಡಿಕೆ. ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆದ ನಂತರವೇ ಹೊಸ ಕಾರನ್ನು ಖರೀದಿಸಿ ಕೊಡಲಾಗುತ್ತದೆ. ಆದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಂಸದೆ ಸುಮಲತಾ ಅವರು ಬಳಸಿದ್ದ ಸರ್ಕಾರಿ ಕಾರನ್ನು ನಿರಾಕರಿಸಿದ್ದಾರೆ ಎಂದಿದ್ದಾರೆ. ಕುಮಾರಸ್ವಾಮಿ ಏನು ಹೇಳಿದ್ದರು?: ಇತ್ತೀಚೆಗೆ ಮಾತನಾಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಕಾರಿನ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ದೂರಿದ್ದರು. ರಾಜ್ಯ ಸರ್ಕಾರವು ದ್ವೇಷ ರಾಜಕಾರಣ ಮಾಡುತ್ತಿದೆ. ನಾನೊಬ್ಬ ಕೇಂದ್ರ ಸಚಿವನಾಗಿದ್ದರೂ ಪ್ರೋಟೋಕಾಲ್ ಪ್ರಕಾರ ಸರ್ಕಾರ ನಡೆದುಕೊಳ್ಳುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.
ಪ್ರೋಟೋಕಾಲ್ ಪ್ರಕಾರ ನಾನು ಸಾಮಾನ್ಯವಾಗಿ ದೆಹಲಿಯಿಂದ ಬೆಂಗಳೂರಿಗೆ ಬಂದಾಗ ಕಾರನ್ನು ಕಳಿಸಬೇಕಿತ್ತು. ಆದರೆ, ಸರ್ಕಾರ ಕಾರು ಕಳಿಸಿಲ್ಲ. ಸದ್ಯ ನಾನು ನಮ್ಮ ಇಲಾಖೆಯ ಕಾರನ್ನು ತರಿಸಿಕೊಂಡು, ಅದರಲ್ಲೇ ಪ್ರಯಾಣಿಸುತ್ತಿದ್ದೇನೆ. ಕಾಂಗ್ರೆಸ್ ಕಾರಿನ ವಿಚಾರದಲ್ಲೂ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕುಮಾರಸ್ವಾಮಿ ಗರಂ ಆಗಿದ್ದರು. ಈ ಹಿಂದೆ ಸುಮಲತಾ ಅಂಬರೀಶ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವಿಚಾರವಾಗಿ ಜಿದ್ದಾಜಿದ್ದಿ ಇತ್ತು. ಅಲ್ಲದೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮುನಿಸು ಮರೆತಿದ್ದರು ಎನ್ನಲಾಗಿತ್ತು. ಆದರೆ, ಈ ಕಾರಿನ ವಿಚಾರದ ಬೆನ್ನಲ್ಲೇ ಕುಮಾರಸ್ವಾಮಿ ಅವರಿಗೆ ಸುಮಲತಾ ಅವರ ಮೇಲೆ ಇನ್ನೂ ಮುನಿಸು ಇದೆಯಾ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.