ಮಂಗಳೂರು || ಸುಹಾಸ್ ಶೆಟ್ಟಿಯವರ ಕುಟುಂಬಕ್ಕೆ BJP ಪರವಾಗಿ 25 ಲಕ್ಷ ನೀಡಬೇಕೆಂದು ತೀರ್ಮಾನ ಮಾಡಿದ್ದೇವೆ – Vijayendra

ಮಂಗಳೂರು || ಸುಹಾಸ್ ಶೆಟ್ಟಿಯವರ ಕುಟುಂಬಕ್ಕೆ BJP ಪರವಾಗಿ 25 ಲಕ್ಷ ನೀಡಬೇಕೆಂದು ತೀರ್ಮಾನ ಮಾಡಿದ್ದೇವೆ - Vijayendra

ಮಂಗಳೂರು: ಸುಹಾಸ್ ಶೆಟ್ಟಿಯವರ ಹತ್ಯೆಯಿಂದ ಅವರ ಬಡ ಕುಟುಂಬದ ಆಧಾರಸ್ತಂಭವೇ ಕಳಚಿಬಿದ್ದಂತಾಗಿದೆ. ಸುಹಾಸ್ ಶೆಟ್ಟಿಯವರ ಕುಟುಂಬಕ್ಕೆ ಬಿಜೆಪಿ ಪರವಾಗಿ 25 ಲಕ್ಷ ನೀಡಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ಘಟನೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು, ಕುಟುಂಬದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ರಾಜ್ಯ ಸರಕಾರ ಪರಿಹಾರ ಘೋಷಿಸಬೇಕೆಂದು ಅವರು ಆಗ್ರಹಿಸಿದರು. ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ಐಎ) ಘಟನೆ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.

ಈ ದುರ್ಘಟನೆಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಅವರ ಜೀವಕ್ಕೆ ಬೆದರಿಕೆ ಇದ್ದರೂ ರಕ್ಷಣೆ ನೀಡಿಲ್ಲ; ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ, ಗೃಹ ಇಲಾಖೆಯ ವೈಫಲ್ಯ ಮತ್ತು ಕಾಂಗ್ರೆಸ್ ಸರಕಾರದ ನೀತಿಯಿಂದ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನುಡಿದರು.

ರಾಜ್ಯದ ಜನತೆಗೆ ಹಾಗೂ ಹಿಂದೂ ಕಾರ್ಯಕರ್ತರಿಗೆ ಕಾಂಗ್ರೆಸ್ ಸರಕಾರದ ಕುರಿತು ವಿಶ್ವಾಸ ಇಲ್ಲದಂತಾಗಿದೆ ಎಂದ ಅವರು, ನಾನು, ವಿಪಕ್ಷ ನಾಯಕರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದೇವೆ. ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದೇವೆ ಎಂದು ವಿವರಿಸಿದರು.

ಇಂಥ ಘಟನೆಗಳು ನಡೆದಾಗ ರಾಜ್ಯ ಸರಕಾರ ಯಾವತ್ತೂ ಹಿಂದೂ ಕಾರ್ಯಕರ್ತರ ಪರವಾಗಿ ನಿಂತಿಲ್ಲ ಎಂದು ಆಕ್ಷೇಪಿಸಿದರು. ಈ ಸರಕಾರಕ್ಕೆ ಮನುಷ್ಯತ್ವ ಇದ್ದರೆ ಆ ಬಡ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು. ಎನ್ಐಎಯಿಂದ ತನಿಖೆ ಆಗಬೇಕೆಂದು ನಿರ್ಧರಿಸಲಿ ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *