ಮಂಗಳೂರು: ಭಾರತೀಯ ರೈಲ್ವೆ ದೇಶದಲ್ಲಿ ದೀರ್ಘ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಓಡಿಸಲಿದೆ. ದಕ್ಷಿಣ ಭಾರತದಲ್ಲಿ ಕೇರಳ ರಾಜ್ಯಕ್ಕೆ ಈ ಮಾದರಿ ರೈಲು ಸಿಗಲಿದ್ದು, ಯಾವ ಮಾರ್ಗದಲ್ಲಿ ಸಂಚಾರ ನಡೆಸಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ತಿರುವನಂತಪುರಂ-ಮಂಗಳೂರು ಸೇರಿದಂತೆ ಮೂರು ಮಾರ್ಗದ ಪ್ರಸ್ತಾವನೆ ಇದೆ.

ಕೆಲವೇ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ಸಂಚಾರ ಆರಂಭಿಸಲು ಭಾರತೀಯ ರೈಲ್ವೆ ತಯಾರಿ ನಡೆಸಿದೆ. ವಂದೇ ಭಾರತ್ ಮಾದರಿ ರೈಲುಗಳಿಗೆ ಕೇರಳ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಆದ್ದರಿಂದ ವಂದೇ ಭಾರತ್ ಸ್ಲೀಪರ್ ರೈಲನ್ನು ಸಹ ಕೇರಳಕ್ಕೆ ನೀಡಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.
ಮೂರು ಮಾರ್ಗದಲ್ಲಿ ಸಂಚಾರ?; ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಕೇರಳ ರಾಜ್ಯ ಯಾವ ಮಾರ್ಗದಲ್ಲಿ ಓಡಿಸಲಿದೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ. ಮಾಹಿತಿಗಳ ಪ್ರಕಾರ ತಿರುವನಂತಪುರಂ-ಮಂಗಳೂರು, ಬೆಂಗಳೂರು-ತಿರುವನಂತಪುರಂ ಮತ್ತು ಕನ್ಯಾಕುಮಾರಿ-ಶ್ರೀನಗರ ನಡುವೆ ಈ ರೈಲುಗಳನ್ನು ಓಡಿಸುವ ಪ್ರಸ್ತಾವನೆ ಕೇಳಿ ಬಂದಿದೆ. ಉತ್ತರ ರೈಲ್ವೆಗೆ ಈ ವಂದೇ ಭಾರತ್ ಸ್ಲೀಪರ್ ರೈಲು ಸಿಗಲಿದೆ. ಪ್ರಯಾಣಿಕರ ಸಂಖ್ಯೆ, ಮಾರ್ಗದಲ್ಲಿರುವ ಇತರ ರೈಲುಗಳ ಸಂಖ್ಯೆ ಸೇರಿದಂತೆ ಇತರ ಆಯಾಮಗಳ ಕುರಿತು ಪರಿಶೀಲನೆ ನಡೆಸಿದ ಬಳಿಕ ವಂದೇ ಭಾರತ್ ಸ್ಲೀಪರ್ ರೈಲು ಮಾರ್ಗವನ್ನು ಅಂತಿಮಗೊಳಿಸಲಾಗುತ್ತದೆ. ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 160 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಈ ರೈಲಿನಲ್ಲಿ 823 ಪ್ರಯಾಣಿಕರು ಸಂಚಾರವನ್ನು ನಡೆಸಬಹುದು. ರೈಲು 611 ಎಸಿ 3 ಟೈರ್, 188 ಎಸಿ 2 ಟೈರ್, 24 ಎಸಿ ಫಸ್ಟ್ ಕ್ಲಾಸ್ ಆಸನಗಳನ್ನು ಹೊಂದಿರುತ್ತದೆ.
ಅತ್ಯಾಧುನಿಕ ವ್ಯವಸ್ಥೆಗಳನ್ನು ಈ ವಂದೇ ಭಾರತ್ ಸ್ಲೀಪರ್ ರೈಲು ಬೋಗಿಗಳು ಒಳಗೊಂಡಿವೆ. ಯುಎಸ್ಬಿ ಚಾರ್ಜಿಂಗ್ ಪಾಯಿಂಟ್, ಸಾರ್ವಜನಿಕ ಘೋಷಣೆ ವ್ಯವಸ್ಥೆ, ಸಿಸಿಟಿವಿ ಕಣ್ಗಾವಲು, ಉತ್ತಮ ಗುಣಮಟ್ಟದ ಶೌಚಾಲಯಗಳನ್ನು ಇದು ಒಳಗೊಂಡಿರಲಿದೆ. ಈಗಾಗಲೇ ಫೆಬ್ರವರಿಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳ ಪ್ರಾಯೋಗಿಕ ಸಂಚಾರವನ್ನು ಮಾಡಲಾಗಿದೆ. ಭಾರತೀಯ ರೈಲ್ವೆ 16 ಬೋಗಿಯ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಮುಂಬೈ-ಅಹಮದಾಬಾದ್ ವಿಭಾಗದಲ್ಲಿ ಸಂಚಾರವನ್ನು ನಡೆಸಿದೆ. ಈ ಪ್ರಾಯೋಗಿಕ ಸಂಚಾರವನ್ನು ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (ಆರ್ಡಿಎಸ್ಒ) ಪರಿಶೀಲನೆ ನಡೆಸಿದ್ದು, ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ 2024ರ ಡಿಸೆಂಬರ್ 17ರಂದು ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ತಯಾರಿಕೆಯನ್ನು ಪೂರ್ಣಗೊಳಿಸಿತ್ತು. ಬಳಿಕ ಅದನ್ನು ಕೋಟಾ ವಿಭಾಗಕ್ಕೆ ತರಲಾಗಿತ್ತು ಮತ್ತು ಸತತ ಮೂರು ದಿನಗಳವರೆಗೆ 30 ರಿಂದ 40 ಕಿಲೋಮೀಟರ್ಗಳ ಕಡಿಮೆ ದೂರಕ್ಕೆ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಆಗ ರೈಲು ಗಂಟೆಗೆ 180 ಕಿ. ಮೀ. ಗಿಂತ ಹೆಚ್ಚಿನ ವೇಗದಲ್ಲಿ ಸಂಚಾರ ನಡೆಸಿದೆ.
ಯಶಸ್ವಿ ಪ್ರಾಯೋಗಿಕ ಸಂಚಾರ ರೈಲ್ವೆ ಆಧುನೀಕರಣದಲ್ಲಿ ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿದೆ. ಈ ಮಾದರಿ ರೈಲು ಪ್ರಯಾಣಿಕರಿಗೆ ಸುಗಮ ಮತ್ತು ಐಷಾರಾಮಿ ಪ್ರಯಾಣದ ಅನುಭವವನ್ನು ನೀಡುತ್ತದೆ. ಸೌಕರ್ಯ, ವೇಗ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಂದೇ ಭಾರತ್ ಸ್ಲೀಪರ್ ರೈಲುಗಳು ಮುಂಬರುವ ದಿನಗಳಲ್ಲಿ ಜನಸಾಮಾನ್ಯರಿಗೆ ರಾತ್ರಿ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಏಪ್ರಿಲ್ 12ರಂದು ಮಾತನಾಡಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, “ಒಂದೆರಡು ತಿಂಗಳುಗಳಲ್ಲಿ ವಂದೇ ಭಾರತ್ ರೈಲಿಗೆ ಸ್ಲೀಪರ್ ಕೋಚ್ಗಳು ಬರಲಿದ್ದು, ಮಂಗಳೂರಿಗೂ ವಂದೇ ಭಾರತ್ ಸ್ಲೀಪರ್ ಕೋಚ್ ಸೌಲಭ್ಯ ಸಿಗಲಿದೆ” ಎಂದು ಹೇಳಿದ್ದರು. ಮಂಗಳೂರು-ಮಡಗಾಂವ್, ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿ ಈಗಾಗಲೇ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತಿದೆ. ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸಬೇಕು ಎಂಬ ಬೇಡಿಕೆಯೂ ಇದೆ. ರೈಲ್ವೆ ಇಲಾಖೆ ಯಾವ ತೀರ್ಮಾನ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ.