ಮೈಸೂರು: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಉದ್ಯೋಗಿಗಳು ಭಯಭೀತರಾಗಿದ್ದಾರೆ. ಬುಧವಾರ ಮೂರನೇ ಬಾರಿಗೆ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯ ಸೆರೆಯಾಗಿದ್ದು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಹೀಗಾಗಿ ಚಿರತೆ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಮೈಸೂರು ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಮೂರನೇ ಬಾರಿ ಪ್ರತ್ಯಕ್ಷವಾದಂತಿದೆ.
ಮೈಸೂರು ಇನ್ಫೋಸಿಸ್ ಕ್ಯಾಂಪಸ್ ವಿಸ್ತೀರ್ಣವಾದ ಭೂ ಪ್ರದೇಶವನ್ನು ಹೊಂದಿದೆ. ಈ ಪ್ರದೇಶದಲ್ಲಿ ಡಿಸೆಂಬರ್ 31ರಂದು ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಕಾಣಿಸಿಕೊಂಡು ಬರೋಬ್ಬರಿ ಹತ್ತು ದಿನಗಳು ಕಳೆದರೂ ಕೂಡ ಚಿರತೆಯನ್ನ ಮಾತ್ರ ಸೆರೆ ಹಿಡಿಯಲಾಗಿಲ್ಲ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಸಂಸ್ಥೆಯ ಆಡಳಿತ ಮಂಡಳಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಿದೆ.
ಚಿರತೆಯಿಂದ ನಾರಾಯಣ ಮೂರ್ತಿ ಕನಸು ನನಸು ಇನ್ಸೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಾವು ಯುವಕರಾಗಿದ್ದಾಗ ವಾರಕ್ಕೆ 90 ಗಂಟೆ ಕೆಲಸ ಮಾಡುತ್ತಿದ್ದರಂತೆ. ಈಗಿನ ಯುವಕರು ಕನಿಷ್ಠ ವಾರಕ್ಕೆ 70 ಗಂಟೆ ಕಾಲ ಕೆಲಸ ಮಾಡಬೇಕು ಎನ್ನುವ ಸಲಹೆಯನ್ನು ಈ ಹಿಂದೆ ನೀಡಿದ್ದರು. ನಾರಾಯಣ ಮೂರ್ತಿಯವರ ಈ ಕನಸು ಸದ್ಯ ಚಿರತೆಯಿಂದ ನನಸಾಗಿದೆ. ಹೌದು… ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಚಿರತೆ ನಾರಾಯಣ ಮೂರ್ತಿ ಅವರ ಕನಸನ್ನು ನನಸು ಮಾಡಿದೆ ಎನ್ನುವ ಕಾಮಿಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್ಸ್ ಹರಿದಾಡುತ್ತಿವೆ. ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಚಿರತೆ ಗಂಭೀರವಾಗಿ ಪರಿಗಣಿಸಿ ಪದೇ ಪದೇ ಕ್ಯಾಂಪಸ್ಗೆ ಬರುತ್ತಿದೆ. ಅವರ ಇಚ್ಚೆಯಂತೆ ಅದು ವಾರದಲ್ಲಿ 90 ಗಂಟೆ ಕೆಲಸ ಮಾಡುತ್ತಿದೆ ಎಂದು ಕಾಮಿಡಿ ಮಾಡಲಾಗುತ್ತಿದೆ.
ಉದ್ಯೋಗಿಗಳು ಕೊರೊನಾ ಬಳಿಕ ವರ್ಕ್ ಫ್ರಾಂ ಹೋಮ್ಗೆ ಎಷ್ಟೇ ಪ್ರಯತ್ನಪಟ್ಟರೂ ಕೂಡ ಸಾಧ್ಯವಾಗಿರಲಿಲ್ಲ. ಆದರೀಗ ಚಿರತೆಯಿಂದ ಅದು ಸಾಧ್ಯವಾಗಿದೆ. ಇದರಿಂದ ಕೆಲ ಉದ್ಯೋಗಿಗಳು ಸಖತ್ ಖುಷಿಯಾಗಿದ್ದಾರೆ. ಉದ್ಯೋಗಿಗಳಿಗೆ ಶಾಪವಾದ ಚಿರತೆ ಆದರೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡಿರುವುದು ಕೆಲ ಉದ್ಯೋಗಿಗಳಿಗೆ ವರವಾಗಿರದೆ ಶಾಪವಾಗಿ ಬದಲಾಗಿದೆ. ಯಾಕೆಂದರೆ ಮನೆಯಿಂದ ಕೆಲಸ ಮಾಡುವುದು ತುಂಬಾ ಸುಲಭ, ಮೇಲಾಧಿಕಾರಿಗಳ ಕಣ್ಣು ತಪ್ಪಿಸಬಹುದು ಅಂದುಕೊಳ್ಳುವ ಹಾಗಿಲ್ಲ. ಯಾಕೆಂದರೆ ಆಫೀಸ್ನಲ್ಲಿ ಕೆಲಸ ಮಾಡಿಸಿಕೊಳ್ಳುವುದಕ್ಕಿಂತ ಮನೆಯಿಂದ ಹೆಚ್ಚು ಸಮಯ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಉದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದಿಗೆ ಹತ್ತು ದಿನ ಕಳೆದರು ಸೆರೆ ಸಿಗದ ಚಿರತೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ಗೆ ಪ್ರವೇಶಿಸಿದ ಚಿರತೆಯನ್ನು ಬುಧವಾರ ಮೂರನೇ ಬಾರಿಗೆ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ಬಾರಿ ಥರ್ಮಲ್ ಡ್ರೋನ್ ಬಳಸಿ ಚಿರತೆಯನ್ನು ಪತ್ತೆ ಮಾಡಲಾಗಿದೆ. ಬುಧವಾರ ಬೆಳಗಿನ ಜಾವ 12.30 ರ ಸುಮಾರಿಗೆ ಮಳೆನೀರಿನ ಹೊರಹರಿವಿನ ಬಳಿಯ ಪ್ರತ್ಯೇಕ ಪ್ರದೇಶದ ಬಳಿ ಚಿರತೆ ಕಂಡುಬಂದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆ ಕ್ಯಾಂಪಸ್ನ ಪ್ರತ್ಯೇಕ ಸ್ಥಳದಲ್ಲಿ ಅಡಗಿಕೊಂಡಿದೆ. ಪ್ರಸ್ತುತ ಇದು ಕೆಲಸದ ಸ್ಥಳಗಳು ಮತ್ತು ವಸತಿ ಸೌಲಭ್ಯಗಳಿಂದ ದೂರವಿದೆ. ಇದರಿಂದ ಯಾವುದೇ ತೊಂದರೆ ಈವರೆಗೂ ಆಗಿಲ್ಲ. ಆದರೆ ವಿಶ್ರಾಂತಿ ಪಡೆಯಲು ಮಳೆನೀರಿನ ಹೊರಹರಿವಿನ ಮೂಲಕ ಆಗಾಗ್ಗೆ ಕ್ಯಾಂಪಸ್ಗೆ ಚಿರತೆ ಪ್ರವೇಶಿಸುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಮುಂದಿನ ಆದೇಶದವರೆಗೆ ಯಾವ ಉದ್ಯೋಗಿಗಳನ್ನೂ ಆವರಣದೊಳಗೆ ಬಿಡಲು ಆಗುವುದಿಲ್ಲ ಎಂದು ಸಂಸ್ಥೆಯ ಎಚ್ಆರ್ ವಿಭಾಗದವರು ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಹೇಳುವುದೇನು? ಅರಣ್ಯ ಸಂರಕ್ಷಣಾಧಿಕಾರಿ ಎಂ. ಮಾಲತಿ ಪ್ರಿಯಾ ಈ ಬಗ್ಗೆ ಮಾತನಾಡಿ, ಅದು ಓಡಾಡುತ್ತಿದ್ದ ಪ್ರದೇಶದ ಬಳಿ ಇರಿಸಲಾದ ಎಲ್ಲಾ ಪಂಜರಗಳು ಇನ್ನೂ ಕೂಡ ಹಾಗೇ ಇವೆ. ಚಿರತೆಯನ್ನು ಶೀಘ್ರದಲ್ಲೇ ಬಲೆಗೆ ಬೀಳಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಚಿರತೆ ಕಾರ್ಯಪಡೆಗೆ ಸೇರಿದ ಸಿಬ್ಬಂದಿಗಳ ತಂಡವು ಚಿರತೆಯನ್ನು ಜೀವಂತವಾಗಿ ಹಿಡಿಯಲು ಪ್ರಯತ್ನಿಸುತ್ತಿದೆ. ಆದರೆ ಅದು ಇನ್ನೂ ಕೂಡ ಸಾಧ್ಯವಾಗಿಲ್ಲ. ಚಿರತೆ ಸೆರೆಗೆ ಅಲ್ಲಲ್ಲಿ ಬೋನ್ಗಳನ್ನು ಇರಿಸಲಾಗಿದೆ. ಜೊತೆಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಬುಧವಾರ ಮತ್ತೆ ಮೂರನೇ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ನೌಕರರ ಸುರಕ್ಷತೆಯ ದೃಷ್ಟಿಯಿಂದ ಮನೆಯಿಂದ ಕೆಲಸ ಮಾಡಲು ಉದ್ಯೋಗಿಗಳಿಗೆ ತಿಳಿಸಲಾಗಿದೆ. ಆದರೆ ಇನ್ನೂ ಕೂಡ ಚಿರತೆ ಕ್ಯಾಂಪಸ್ನಲ್ಲಿಯೇ ಇದೆ ಎಂದು ಹೇಳಾಗುತ್ತಿದೆ. ಆದರೆ ಕ್ಯಾಂಪಸ್ನ ಪ್ರತ್ಯೇಕ ಸ್ಥಳದಲ್ಲಿ ಚಿರತೆ ಕಂಡುಬಂದಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.