ಮೈಸೂರು || ಮೆಮು ರೈಲು ಸಂಚಾರದ ಕನಸು ಶೀಘ್ರವೇ ನನಸು

ಮಂಗಳೂರು || Vande Bharat Express: ಗೋವಾ-ಮಂಗಳೂರು ವಂದೇ ಭಾರತ್ ರೈಲು ಕೇರಳ ತನಕ ವಿಸ್ತರಣೆ

Vande Bharat Express

ಮೈಸೂರು: ಮೈಸೂರು ಮತ್ತು ಚಾಮರಾಜನಗರ ನಡುವೆ ಮೆಮು ರೈಲು ಓಡಿಸಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಆದರೆ ಈ ರೈಲು ಸಂಚಾರಕ್ಕೆ ತೊಡಕಾಗಿರುವುದು ಮೈಸೂರು-ಚಾಮರಾಜನಗರ ನಡುವಿನ ರೈಲ್ವೆ ಹಳಿಯ ವಿದ್ಯುದೀಕರಣ. ಈ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಆದರೆ ಮೈಸೂರು ವಿಮಾನ ನಿಲ್ದಾಣದ ಸಮೀಪದ ಕೆಲವು ಕಿ. ಮೀ. ಕಾಮಗಾರಿ ಪೂರ್ಣಗೊಳ್ಳಬೇಕಿದ್ದು ಸುಮಾರು ಮೂರು ವರ್ಷದಿಂದ ಇದಕ್ಕೆ ಇರುವ ತೊಂದರೆ ಪರಿಹಾರವಾಗಿಲ್ಲ.

ಸುಮಾರು 20 ಕೋಟಿ ವೆಚ್ಚದಲ್ಲಿ ಮೈಸೂರು-ಚಾಮರಾಜನಗರ ನಡುವಿನ ರೈಲ್ವೆ ಹಳಿ ವಿದ್ಯುದೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಮೈಸೂರು ವಿಮಾನ ನಿಲ್ದಾಣದ ಬಳಿಕ ಕೆಲವು ಕಿ. ಮೀ. ಕಾಮಗಾರಿಯನ್ನು ಮುಕ್ತಾಯಗೊಳಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಎನ್ಒಸಿ ನೀಡಿಲ್ಲ.

ಆದ್ದರಿಂದ ಸುಮಾರು ಮೂರು ವರ್ಷಗಳು ಕಳೆದರೂ ಈ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಪೂರ್ಣ ಕಾಮಗಾರಿ ಮುಗಿಯುವ ತನಕ ಮೆಮು ಮತ್ತು ವಿದ್ಯುತ್ ಚಾಲಿತ ರೈಲುಗಳನ್ನು ಮಾರ್ಗದಲ್ಲಿ ಓಡಿಸಲು ಸಾಧ್ಯವಿಲ್ಲ.

ಕಾರ್ಯ ಸಾಧ್ಯತಾ ವರದಿ: ಮಂಡಕಹಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದ ಬಳಿ ರೈಲ್ವೆ ಟ್ರಾಕ್ ವಿದ್ಯುದೀಕರಣ ಮಾಡಿದರೆ ಅದು ವಿಮಾನ ನಿಲ್ದಾಣ ಎಟಿಎಸ್ ಮೇಲೆ ಪರಿಣಾಮ ಬೀರಲಿದೆ ಎಂಬುದು ಎಎಐ ವಾದ ಆದ್ದರಿಂದ ಕಾಮಗಾರಿಗೆ ಒಪ್ಪಿಗೆ ನೀಡಿಲ್ಲ. ವಿಮಾನ ನಿಲ್ದಾಣದ ಸಮೀಪ ರೈಲ್ವೆ ಹಳಿ ವಿನ್ಯಾಸ ಬದಲಿಸಿ ಕಾಮಗಾರಿ ಪೂರ್ಣಗೊಳಿಸಲು ಈಗ ಚಿಂತನೆ ನಡೆಸಲಾಗಿದೆ.

ಇದಕ್ಕಾಗಿ ಎಎಐ ಮತ್ತು ಭಾರತೀಯ ರೈಲ್ವೆ ಎರಡೂ ಕಡೆಯಿಂದ ಕಾರ್ಯ ಸಾಧ್ಯತಾ ವರದಿ ತಯಾರಾಗಲಿದೆ. ಸಂಸದ ಯದುವೀರ್ ಒಡೆಯರ್ ಸಹ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳೋಣ ಎಂದು ಹೇಳಿದ್ದು, ರೈಲ್ವೆ ಈಗಾಗಲೇ ವರದಿ ತಯಾರು ಮಾಡಲು ಟೆಂಡರ್ ಆಹ್ವಾನಿಸಿದೆ. ಹಾಲಿ ಇರುವ ರೈಲು ಮಾರ್ಗದಲ್ಲಿ ವಿಮಾನ ನಿಲ್ದಾಣದ ಸಮೀಪ ಹಳಿಯ ವಿನ್ಯಾಸ ಬದಲಾವಣೆ ಮಾಡಲಾಗುತ್ತದೆ. ಈ ಸಮಸ್ಯೆ ಬಗೆಹರಿಸಲು ಸುರಂಗ ಮಾರ್ಗ ನಿರ್ಮಾಣ ಮಾಡಬಹುದೇ? ಎಂದು ಸಹ ಕಾರ್ಯ ಸಾಧ್ಯತಾ ವರದಿ ವಿವರಗಳನ್ನು ನೀಡಲಿದೆ.

ಹಳಿಗಳ ವಿನ್ಯಾಸ ಬದಲು, ಸುರಂಗ ಮಾರ್ಗ ನಿರ್ಮಾಣ ಎರಡು ಆಯ್ಕೆಯನ್ನು ಇಟ್ಟುಕೊಳ್ಳಲಾಗಿದೆ. ವರದಿಯಲ್ಲಿ ಯಾವುದು ಉತ್ತಮ ಎಂದು ಶಿಫಾರಸು ಮಾಡಲಾಗುತ್ತದೆಯೋ ಅದನ್ನು ಎಎಐ, ರೈಲ್ವೆ ಇಲಾಖೆ ಒಪ್ಪಿಗೆ ಪಡೆದು ಜಾರಿಗೊಳಿಸಲಾಗುತ್ತದೆ. ಈ ಸಮಸ್ಯೆ ಬಗೆಹರಿದು ಮಾರ್ಗ ವಿದ್ಯುದೀಕರಣಗೊಂಡರೆ ಮೈಸೂರು ರೈಲು ನಿಲ್ದಾಣದ ಮೇಲಿನ ಒತ್ತಡವೂ ಸಹ ಕಡಿಮೆಯಾಗಲಿದೆ. ಹಲವು ರೈಲುಗಳನ್ನು ಚಾಮರಾಜನಗರದ ಕಡೆ ಕಳಿಸಲು ಅನುಕೂಲವಾಗಲಿದೆ. ಆದರೆ ಅದಕ್ಕೂ ಮೊದಲು ಕಾಮಗಾರಿ ಪೂರ್ಣಗೊಳ್ಳಬೇಕಿದೆ. ವಿದ್ಯುದೀಕರಣ ಬಾಕಿ ಇರುವುದರಿಂದ ಮೈಸೂರು-ಚಾಮರಾಜನಗರ ನಡುವೆ ಮೆಮು ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ ನಂಜನಗೂಡು ರಸ್ತೆಯಲ್ಲಿ ಹಲವು ಕೈಗಾರಿಕೆಗಳು ಬಂದಿವೆ. ಇಲಾಖೆ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ರೈಲು ಸಂಚಾರ ಆರಂಭಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ಮೈಸೂರು-ಚಾಮರಾಜನಗರ ನಡುವಿನ 61 ಕಿ. ಮೀ. ಮಾರ್ಗದ ವಿದ್ಯುದೀಕರಣವನ್ನು 2021ರಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿತ್ತು. ಪವರ್ ಗುರು ಇನ್ಫ್ರಾಟೆಕ್ ಪ್ರೈ. ಲಿ. ಕಾಮಗಾರಿ ಟೆಂಡರ್ ಪಡೆದಿತ್ತು. 2022ರ ಜನವರಿಗೆ ವಿದ್ಯುದೀಕರಣ ಮುಕ್ತಾಯಗೊಳಿಸುವ ಗುರಿ ಇತ್ತು. ಆದರೆ ಈಗ ಕಾಮಗಾರಿ ಪೂರ್ಣಗೊಳ್ಳಲು ವಿಮಾನ ನಿಲ್ದಾಣವೇ ಅಡ್ಡಿಯಾಗಿದೆ. ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿನ ರೈಲು ಮಾರ್ಗ ವಿದ್ಯುದೀಕರಣ ಮಾಡಿದರೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪ್ರಭಾವದಿಂದ ವಿಮಾನಗಳ ದಿಕ್ಸೂಚಿಗಳ ಮೇಲೆ ಪ್ರಭಾವ ಬೀರಬಹುದು ಎಂಬುದು ಎಎಐ ವಾದವಾಗಿದೆ. ಆದ್ದರಿಂದ ಸುಮಾರು 1 ಕಿ. ಮೀ. ಮಾರ್ಗದ ವಿದ್ಯುದೀಕರಣ ಮಾಡಲು ಒಪ್ಪಿಗೆ ಸಿಕ್ಕಿಲ್ಲ. ವಿದ್ಯುದೀಕರಣ ಮುಗಿದು ಹೆಚ್ಚು ರೈಲುಗಳು ಉಭಯ ನಗರಗಳ ನಡುವೆ ಸಂಚಾರ ಆರಂಭಿಸಿದರೆ ಮೈಸೂರು, ನಂಜನಗೂಡು, ಚಾಮರಾಜನಗರ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಎಲ್ಲಾ ಮಾರ್ಗಗಳ ವಿದ್ಯುದೀಕರಣಕ್ಕೆ ಆದ್ಯತೆ ನೀಡಿದೆ. ಇದಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ.

Leave a Reply

Your email address will not be published. Required fields are marked *