ಬೆಂಗಳೂರು: ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರ ಕನಸಿನ ಬಹುನಿರೀಕ್ಷಿತ ‘ಎನ್‌ಸಿ ಕ್ಲಾಸಿಕ್’ ಜಾವೆಲಿನ್ ಥ್ರೋ ಸ್ಪರ್ಧೆಯ ಚೊಚ್ಚಲ ಆವೃತ್ತಿಯನ್ನು ಪಂಚಕುಲದಿAದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಮೇ 24ರಂದು ಹರಿಯಾಣದ ಪಂಚಕುಲದಲ್ಲಿರುವ ತಾವ್ ದೇವಿ ಲಾಲ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಸ್ಪರ್ಧೆಯನ್ನು ಫ್ಲಡ್ ಲೈಟ್ಸ್ ಸಮಸ್ಯೆಯ ಕಾರಣದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಿಂದ ವರ್ಚುವಲ್ ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿ ಮಾತನಾಡಿದ ಸ್ಪರ್ಧೆಯ ಸಂಘಟಕರಲ್ಲಿ ಒಬ್ಬರಾಗಿರುವ ನೀರಜ್ ಚೋಪ್ರಾ ಅವರು ‘ಮೇ 24ರಂದೇ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.
ವರ್ಲ್ಡ್ ಅಥ್ಲೆಟಿಕ್ಸ್ ‘ಎ’ ವಿಭಾಗ ಅಥವಾ ಕಾಂಟಿನೆAಟಲ್ ಟೂರ್ ಗೋಲ್ಡ್-ಲೆವೆಲ್ ಈವೆಂಟ್ ಎಂದು ವರ್ಗೀಕರಿಸಲಾಗಿರುವ ಎನ್‌ಸಿ ಕ್ಲಾಸಿಕ್ – 2025 ಭಾರತದಲ್ಲಿ ಈ ವಿಧದ ಮೊದಲ ಜಾವೆಲಿನ್ ಸ್ಪರ್ಧೆಯಾಗಿರಲಿದೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಮತ್ತು ಹಾಲಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರು ಈ ಸ್ಪರ್ಧೆಯ ನೇತೃತ್ವ ವಹಿಸಿದ್ದಾರೆ.
ಚೊಚ್ಚಲ ಆವೃತ್ತಿಯ ಸ್ಪರ್ಧೆಯಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್, 2016ರ ರಿಯೋ ಒಲಿಂಪಿಕ್ ಚಾಂಪಿಯನ್ ಜರ್ಮನಿಯ ಥಾಮಸ್ ರೋಹ್ಲರ್, ಕೀನ್ಯಾದ ಜೂಲಿಯಸ್ ಯೆಗೋ ಹಾಗೂ ಯುಎಸ್‌ಎನ ಕರ್ಟಿಸ್ ಥಾಂಪ್ಸನ್ ಸೇರಿದಂತೆ ಹಲವು ತಾರೆಯರು ಭಾಗವಹಿಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್‌ನ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಂ ಅವರನ್ನೂ ಸ್ಪರ್ಧೆಗೆ ಆಹ್ವಾನಿಸಲಾಗಿದ್ದು, ಪಾಲ್ಗೊಳ್ಳುವಿಕೆಯ ಕುರಿತು ಖಚಿತವಾಗಬೇಕಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.