ಚಳಿಗಾಲ ಆರಂಭವಾಗಿದೆ. ಮಳೆಗಾಲದಂತೆ ಈ ಋತುವಿನಲ್ಲಿಯೂ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ಈ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಹಣ್ಣುಗಳು ಅದರಲ್ಲಿಯೂ ಮುಖ್ಯವಾಗಿ ಪೇರಳೆ ಹಣ್ಣುಗಳು ಹೇರಳವಾಗಿ ಲಭ್ಯವಿರುವುದರಿಂದ ಇವುಗಳನ್ನು ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದರೂ ಕೂಡ ಇವುಗಳ ಸೇವನೆ ಮಾಡುವ ಮೊದಲು ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ ಈ ಹಣ್ಣು ಎಲ್ಲರಿಗೂ ಒಳ್ಳೆಯದಲ್ಲ ಅದರಲ್ಲಿಯೂ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಈ ಹಣ್ಣುಗಳ ಸೇವನೆ ಮಾಡಲೇಬಾರದು.
ಇನ್ನೇನು ಚಳಿಗಾಲ ಆರಂಭವಾಗುವ ಸಮಯ. ಈ ಋತುವಿನಲ್ಲಿ, ವಿವಿಧ ಬಗೆಯ ಹಣ್ಣುಗಳು ಅದರಲ್ಲಿಯೂ ಮುಖ್ಯವಾಗಿ ಪೇರಳೆ (Guava) ಹಣ್ಣುಗಳು ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಲಭ್ಯವಿರುತ್ತದೆ. ಈ ಹಣ್ಣು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು ಸೋಡಿಯಂ, ಪೊಟ್ಯಾಸಿಯಮ್, ಫೈಬರ್, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ಈ ಹಣ್ಣುಗಳನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಈ ಹಣ್ಣುಗಳ ನಿಯಮಿತ ಸೇವನೆಯಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಅದರಲ್ಲಿಯೂ ಮುಖ್ಯವಾಗಿ ಪೇರಳೆ ಹಣ್ಣುಗಳು ಜೀರ್ಣಕಾರಿ ಸಮಸ್ಯೆ ಮತ್ತು ದೈಹಿಕ ದೌರ್ಬಲ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹವನ್ನು ಹಾನಿಕಾರಕ ಕೋಶಗಳಿಂದ ರಕ್ಷಿಸುತ್ತವೆ. ಪರಿಣಾಮವಾಗಿ, ಅನೇಕ ಗಂಭೀರ ಕಾಯಿಲೆಗಳು ಬರುವುದನ್ನು ತಡೆಯಬಹುದಾಗಿದೆ. ಆದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿರುವ ಈ ಹಣ್ಣು ಕೆಲವರಿಗೆ ಇದು ಒಳ್ಳೆಯದಲ್ಲ. ಅದರಲ್ಲಿಯೂ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಈ ಹಣ್ಣು ವಿಷಕ್ಕೆ ಸಮ. ಹಾಗಾದರೆ ಈ ಹಣ್ಣು ಯಾರಿಗೆ ಒಳ್ಳೆಯದಲ್ಲ, ಯಾಕೆ ಸೇವನೆ ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಲರ್ಜಿ ಇರುವವರು ಸೇವನೆ ಮಾಡಬೇಡಿ
ಪೇರಳೆ ಹಣ್ಣನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆಯಾದರೂ, ಕೆಲವರಿಗೆ ಇದು ಉಪಯೋಗಕ್ಕಿಂತ ಹೆಚ್ಚು ಹಾನಿಯುಂಟು ಮಾಡುತ್ತದೆ. ಆದ್ದರಿಂದ, ಅಂತವರು ಪೇರಲ ತಿನ್ನುವುದನ್ನು ಆದಷ್ಟು ತಪ್ಪಿಸಬೇಕು. ಪೇರಳೆ ಹಣ್ಣನ್ನು ಸೇವನೆ ಮಾಡಿದಾಗ ಅಲರ್ಜಿ ಆಗುತ್ತಿದ್ದರೆ ಅಂತವರು ಈ ಹಣ್ಣನ್ನು ಸೇವಿಸಬಾರದು. ಏಕೆಂದರೆ ಈ ಹಣ್ಣನ್ನು ತಿನ್ನುವುದರಿಂದ ಕೆಲವರಲ್ಲಿ ದದ್ದುಗಳು, ತುರಿಕೆ, ಚರ್ಮದ ಮೇಲೆ ಊತ ಅಥವಾ ಉಸಿರಾಟದ ತೊಂದರೆ ಮುಂತಾದ ಅಲರ್ಜಿಯ ಪ್ರತಿಕ್ರಿಯೆಗಳು ಉಂಟಾಗಬಹುದು. ಹಾಗಾಗಿ ಪೇರಳೆ ತಿಂದ ನಂತರ ನಿಮ್ಮ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಜೀರ್ಣಕಾರಿ ಸಮಸ್ಯೆಗಳಿದ್ದರೆ ಸೇವಿಸಬೇಡಿ
ಹೊಟ್ಟೆ ಉಬ್ಬರ, ಅತಿಸಾರ, ಅನಿಲ, ಎದೆಯುರಿ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳಿರುವವರು ಪೇರಳೆ ಹಣ್ಣನ್ನು ತಿನ್ನಲೇಬಾರದು. ಏಕೆಂದರೆ ಪೇರಳೆಯಲ್ಲಿ ವಿಟಮಿನ್ ಸಿ ಮತ್ತು ಫ್ರಕ್ಟೋಸ್ ಅಧಿಕವಾಗಿದ್ದು, ಇದು ಜೀರ್ಣಕಾರಿ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಹೆಚ್ಚುವರಿಯಾಗಿ, ಪೇರಳೆಯಲ್ಲಿರುವ ಬೀಜಗಳು ಮತ್ತು ನಾರಿನಂಶ ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಮಾತ್ರವಲ್ಲ ಪೇರಲವು ಶೀತ- ಪ್ರೇರೇಪಕ ಸ್ವಭಾವವನ್ನು ಹೊಂದಿದೆ. ಆದ್ದರಿಂದ, ಚಳಿಗಾಲದಲ್ಲಿ ಅತಿಯಾಗಿ ಪೇರಲ ಸೇವಿಸುವುದರಿಂದ ಗಂಟಲು ನೋವು, ಶೀತ ಮತ್ತು ಕೆಮ್ಮು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಪೇರಳೆ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಆದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಈಗಾಗಲೇ ಕಡಿಮೆ ಇದ್ದಲ್ಲಿ ಅಂತವರು ಈ ಹಣ್ಣಿನ ಸೇವನೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ನೀವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಪೇರಳೆ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಮಾತ್ರವಲ್ಲ ಪೇರಳೆ ಸೇವಿಸುವುದರಿಂದ ರಕ್ತಸ್ರಾವದ ಅಪಾಯ ಹೆಚ್ಚಾಗುತ್ತದೆ, ಇದು ಗಾಯ ಗುಣವಾಗುವುದನ್ನು ವಿಳಂಬಗೊಳಿಸುತ್ತದೆ ಎಂಬ ಕಾರಣಕ್ಕೆ ಯಾವುದೇ ಶಸ್ತ್ರಚಿಕಿತ್ಸೆಯ ನಂತರ ತಕ್ಷಣವೇ ಪೇರಲ ತಿನ್ನಬಾರದು ಎನ್ನಲಾಗುತ್ತದೆ.
For More Updates Join our WhatsApp Group :




