ತುಮಕೂರು: ಕೋರ ಹೋಬಳಿ ಚಿಕ್ಕತೊಟ್ಲುಕೆರೆಯ ಸಂಜಯ್ ರವರು ಬೆಳಗ್ಗೆ ಹಸುವಿಗೆ ಮೇವು ತರಲು ಜಮೀನಿಗೆ ಹೋಗಿದ್ದಾಗ ಜೋಳದ ಬೆಳೆಯ ಮಧ್ಯದಲ್ಲಿ ಹೆಬ್ಬಾವು ನೋಡಿದ್ದಾರೆ. ಕೂಡಲೇ ಅದೇ ಗ್ರಾಮದಲ್ಲಿ ವಾಸವಿರುವ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ (ವಾರ್ಕೊ) ಉರಗ ರಕ್ಷಕರಾದ ರುದ್ರೇಶ್ ತೊಟ್ಲುಕೆರೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ರುದ್ರೇಶ್ ಮತ್ತು ಜಸ್ವಂತ್ ಸುಮಾರು ೮ ಅಡಿ ಉದ್ದದ ಹೆಬ್ಬಾವನ್ನು ಹಿಡಿದು, ಸುರಕ್ಷಿತವಾಗಿ ವಲಯ ಅರಣ್ಯಾಧಿಕಾರಿ ಸೂಚನೆಯಂತೆ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಚಿಕ್ಕತೊಟ್ಲುಕೆರೆ ಗ್ರಾಮದ ಸುತ್ತಮುತ್ತ ಹಾವುಗಳ ರಕ್ಷಣೆ ಮಾಡಲು ಉರಗ ರಕ್ಷಕ ರುದ್ರೇಶ್ ಅವರಿಗೆ 9353606818 ಕರೆಮಾಡಬಹುದು.