ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ನಿನ್ನೆ ತೆಪ್ಪ ಮುಗುಚಿ ಬಿದ್ದು ನೀರುಪಾಲಾಗಿದ್ದ ಮೂವರ ಶವ ಪತ್ತೆಯಾಗಿದೆ. ಹುಲಿದೇವರ ಬನದ ಸಂದೀಪ್ (35), ಸಿಗಂದೂರಿನ ಚೇತನ್ (30) ಹಾಗೂ ಗಿಣಿವಾರದ ರಾಜು (28) ಎಂಬುವರು ಮೃತಪಟ್ಟವರು.
ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಗುರುವಾರ ಬೆಳಗ್ಗೆ ಸುಮಾರು 40 ಅಡಿ ಅಳದಲ್ಲಿ ಮುಳುಗಿ ಹುಡುಕಾಟ ನಡೆಸಿದಾಗ ಮೂರು ಶವಗಳು ಪತ್ತೆಯಾಗಿವೆ. ಸಾಗರದ ತಾಲೂಕು ಆಡಳಿತ ಸ್ಥಳದಲ್ಲಿಯೇ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದೆ.
ಬುಧವಾರ ಮಧ್ಯಾಹ್ನ ಹೊಳೆಬಾಗಿಲು ಕಡೆಯಿಂದ ಐವರು ಸ್ನೇಹಿತರು ತೆಪ್ಪದಲ್ಲಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ಐವರು ವಾಪಸ್ ಆಗುವಾಗ ತೆಪ್ಪವು ಮುಗುಚಿ ಬಿದ್ದಿತ್ತು. ಈ ವೇಳೆ, ವಿನಯ್ ಹಾಗೂ ಯಶವಂತ ಈಜಿ ದಡ ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಸಾಗರದ ಅಗ್ನಿಶಾಮಕದಳ ಹಾಗೂ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಘಟನೆ ಬಗ್ಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ‘ಈಟಿವಿ ಭಾರತ’ಕ್ಕೆ ಪ್ರತಿಕ್ರಿಯಿಸಿದ್ದ ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ಅವರು, ”ಹೊಳೆಬಾಗಿಲು ಬಳಿ ಕಡೆಯಿಂದ ಹೊಳೆ ಊಟಕ್ಕೆ ಎಂದು ತೆಪ್ಪದಲ್ಲಿ ತೆರಳಿದ್ದ ಐವರು ಸ್ನೇಹಿತರು ವಾಪಸ್ ಬರುವಾಗ ಘಟನೆ ನಡೆದಿದೆ. ನೀರಿನಲ್ಲಿ ಮುಳುಗಿದವರಿಗಾಗಿ ಗುರುವಾರ ಬೆಳಗ್ಗೆ ಹುಡುಕಾಟ ಮುಂದುವರೆಯಲಿದೆ” ಎಂದು ಬುಧವಾರ ಮಾಹಿತಿ ನೀಡಿದ್ದರು.