ಬೆಂಗಳೂರು: ಕಿರುತೆರೆ ಕಲಾವಿದೆ ಮೇಲೆ ಅತ್ಯಾಚಾರವೆಸಗಿದ ಆರೋಪ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ನಿನ್ನೆ ಬಂಧಿತನಾಗಿದ್ದ ನಟ ಮಡೆನೂರು ಮನುನನ್ನು 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮೇ 27ರವರೆಗೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಹಲವು ಬಾರಿ ಅತ್ಯಾಚಾರವೆಸಗಿ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವುದಾಗಿ ಸಂತ್ರಸ್ತೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಿನ್ನೆ ಹಾಸನದಲ್ಲಿ ನಟನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದರು. ಮನುವಿನ ಮೊಬೈಲ್ ವಶಕ್ಕೆ ಪಡೆದು ಶೋಧಿಸಿದರೂ ಸಂತ್ರಸ್ತೆಯ ಖಾಸಗಿ ವಿಡಿಯೋ ಪತ್ತೆಯಾಗಿಲ್ಲ ಎನ್ನಲಾಗಿದೆ. ಇಬ್ಬರು ಜೊತೆಗಿರುವ ಫೋಟೊಗಳು ಮೊಬೈಲ್ನಲ್ಲಿ ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆ ವಿಚಾರಣೆ ನಡೆಸಿದ ಖಾಕಿ: ಖಾಸಗಿ ವಿಡಿಯೋ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಕೋರಿ ಸಂತ್ರಸ್ತ ಮಹಿಳೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದರಂತೆ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದರು. ಬಳಿಕ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ದೂರುದಾರ ಮಹಿಳೆ, “ನಾನು ನೀಡಿದ ದೂರಿಗೂ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ದೂರು ನೀಡಿಲ್ಲ. ನನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿ ವಂಚಿಸಿದ್ದ. ಶನಿವಾರ ಬಂದು ತನಗೆ ಬಲವಂತವಾಗಿ ಕುಡಿಸಿ ಖಾಸಗಿ ವಿಡಿಯೋ ಮಾಡಿ ಕ್ರೂರವಾಗಿ ಮನು ವರ್ತಿಸಿದ್ದರಿಂದ ದೂರು ಕೊಟ್ಟಿದ್ದೇನೆ. ಸಿನಿಮಾ ತಂಡದವರು ದೂರು ನೀಡದಂತೆ ಮನವಿ ಮಾಡಿದರು. ಆದರೂ ಆತನ ಹಿಂಸೆ ತಾಳಲಾರದೆ ಪೊಲೀಸರಿಗೆ ದೂರು ನೀಡಿದ್ದೇನೆ” ಎಂದು ಸಮರ್ಥಿಸಿಕೊಂಡರು.
ಈ ಬಗ್ಗೆ ಮಡೆನೂರು ಮನು ಪತ್ನಿ ಕೂಡ ಪ್ರತಿಕ್ರಿಯೆ ನೀಡಿದ್ದು, “ಇದು ಷಡ್ಯಂತರ. ನನ್ನ ಗಂಡನ ಸಿನಿಮಾ ರಿಲೀಸ್ ಆಗಿದೆ. ಅದನ್ನು ತಡೆಯೋಕೆ ಯಾರೋ ಷಡ್ಯಂತರ ಮಾಡಿದ್ದಾರೆ. ಆಕೆ ಮಾಡಿರೋ ಆರೋಪಗಳು ಸುಳ್ಳು” ಎಂದಿದ್ದಾರೆ.