ಬೆಂಗಳೂರು,: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿದ್ದಾರೆ. ಸಚಿವರಾಗಿ ಪ್ರಿಯಾಂಕ್ ಖರ್ಗೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಜಮೀನು ವಾಪಸ್ ಪಡೆಯಬೇಕು ಎಂದು ರಾಜ್ಯಪಾಲರನ್ನು ಭೇಟಿ ಮಾಡಿ ದೂರನ್ನು ಸಲ್ಲಿಸಿದ್ದೇನೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಜಮೀನು ವಾಪಸ್ ಪಡೆಯಬೇಕು. ಕೈಗಾರಿಕಾ ನಿವೇಶನ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಆದರೆ, ಸಿಎ ಸೈಟ್ ಪಡೆಯಲು ಕೆಲವು ಕಾನೂನುಗಳಿವೆ. ಸಾಮಾಜಿಕ ಚಟುವಟಿಕೆ, ರಂಗಮಂದಿರ, ಆಸ್ಪತ್ರೆ- ಹೀಗೆ ನಿಗದಿತ ಉದ್ದೇಶಕ್ಕೆ ನಮೂದಾಗಿರುತ್ತದೆ. ಇದನ್ನು ಇತರ ಅರ್ಜಿಗಳನ್ನು ತಿರಸ್ಕರಿಸಿ ಪ್ರಬಲರಿಗೆ ಕೊಡಲಾಗಿದೆ. ಇದರಿಂದ ಅನುಮಾನಕ್ಕೆ ಎಡೆಯಾಗಿದೆ ಎಂದು ತಿಳಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ವಿಪಕ್ಷ ನಾಯಕ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ಅವರ ಖಾಸಗಿ, ಒಂದೇ ಮನೆಗೆ ಸೀಮಿತ ಟ್ರಸ್ಟಿಗೆ ನಿವೇಶನ ಕೊಡಲಾಗಿದೆ. ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ ಟ್ರಸ್ಟ್ ಕಲಬುರ್ಗಿಯಲ್ಲಿ ನೋಂದಣಿ ಮಾಡಿದ್ದಾರೆ. ಇದೊಂದು ಧಾರ್ಮಿಕ ಉದ್ದೇಶದ ಟ್ರಸ್ಟ್. ಏರೋಸ್ಪೇಸ್ ಸಂಬಂಧಿಸಿ ನಿವೇಶನ ಪಡೆದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ಒಂದೈವತ್ತು ಕುಟುಂಬಗಳಷ್ಟೇ ದಲಿತರಲ್ಲ; ಛಲವಾದಿ ನಾರಾಯಣಸ್ವಾಮಿ ದಲಿತ ಎಂದಾಕ್ಷಣ ನಾನೊಬ್ಬನೇ ಅಲ್ಲ; 5 ಎಕರೆಯನ್ನು ಒಂದೇ ಕುಟುಂಬಕ್ಕೆ ಕೊಟ್ಟಿದ್ದೀರಿ ಎಂದು ಆಕ್ಷೇಪಿಸಿದರು. 10 ಎಸ್ಸಿ ಸಂಸ್ಥೆಗಳಿಗೆ 50 ಸೆಂಟ್ಸ್ ಕೊಟ್ಟರೆ ಅವು ಬದುಕುತ್ತಿದ್ದವು. ಅಂದರೆ ಏನಿದರ ಅರ್ಥ ಎಂದು ಕೇಳಿದರು.
ಪ್ರಭಾವಿಗಳಿಗೆ ನಿವೇಶನ ಕೊಡಲಾಗಿದೆ. ಸ್ವಜನಪಕ್ಷಪಾತ ಮಾಡುವುದಿಲ್ಲ ಎಂದು ಪ್ರಮಾಣವಚನ ಸ್ವೀಕಾರ ಮಾಡಿರುತ್ತೇವೆ. ಇಲ್ಲಿ ಎಲ್ಲರಿಗೂ ಎಲ್ಲಿ ನ್ಯಾಯ ಕೊಟ್ಟಿದ್ದಾರೆ ಎಂದು ಅವರು ಪ್ರಶ್ನಿಸಿದರು. ಇದು ಪಬ್ಲಿಕ್ ಟ್ರಸ್ಟ್ ಅಲ್ಲ; ಒಂದು ಕುಟುಂಬದ ಟ್ರಸ್ಟ್ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.