ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು (ಜುಲೈ 02) ಜನ್ಮದಿನದ ಸಂಭ್ರಮ. ಅವರಿಗೆ ಈಗ 47 ವರ್ಷ ವಯಸ್ಸು. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಾ ಇವೆ. ಅವರ ಹೊಸ ಸಿನಿಮಾಗಳ ಕಡೆಯಿಂದ ಬರ್ತ್ಡೇ ಗಿಫ್ಟ್ ಬರೋ ನಿರೀಕ್ಷೆ ಇದೆ. ಗಣೇಶ್ ಅವರು ತುಂಬಾನೇ ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ಈಗ ಅವರು ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಬರ್ತ್ಡೇ ದಿನ ಗಣೇಶ್ ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳೋಣ.

ಗಣೇಶ್ ಅವರು ಈ ಮೊದಲು 2002ರಲ್ಲಿ ‘ಪ್ರೇಮಾ ಪಿಶಾಚಿಗಳು’ ಸೀರಿಯಲ್ನಲ್ಲಿ ಕಾಣಿಸಿಕೊಂಡರು. 2003ರಲ್ಲಿ ‘ಕಾಮಿಡಿ ಟೈಮ್’ ಶೋನಲ್ಲಿ ಹೋಸ್ಟ್ ಆಗಿ ಕಾಣಿಸಿಕೊಂಡರು. ಈ ಶೋ ಗಣೇಶ್ಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು ಎನ್ನಬಹುದು. ಈ ಶೋನಲ್ಲಿ ಕಾಲರ್ಗಳ ಜೊತೆ ಮಾತನಾಡಿ, ಅವರನ್ನು ನಗಿಸಿ, ವೀಕ್ಷಕರನ್ನು ನಗಿಸುತ್ತಿದ್ದರು. 2006ರಲ್ಲಿ ‘ಚೆಲ್ಲಾಟ’ ಚಿತ್ರದ ಮೂಲಕ ಗಣೇಶ್ ಅವರು ಹೀರೋ ಆದರು.
ಅದೇ ವರ್ಷ ಬಂದ ‘ಮುಂಗಾರು ಮಳೆ’ ಚಿತ್ರ ಸೂಪರ್ ಹಿಟ್ ಆಯಿತು. 2008ರಲ್ಲಿ ಬಂದ ‘ಗಾಳಿಪಟ’ ಚಿತ್ರವು ಮತ್ತೊಂದು ಹಂತಕ್ಕೆ ಹೋಯಿತು. ಆ ಬಳಿಕ ಗಣೇಶ್ ಅವರು ಹಿಂದಿರುಗಿ ನೋಡಲೇ ಇಲ್ಲ. ಗಣೇಶ್ ಅವರು ಈಗಲೂ ‘ಕಾಮಿಡಿ ಕಿಲಾಡಿಗಳು’ ಶೋನ ನೆನಪಿಸಿಕೊಳ್ಳುತ್ತಾರೆ. ಅವರು ತಾವು ನಡೆದು ಬಂದ ಹಾದಿಯನ್ನು ಮರೆತಿಲ್ಲ ಎನ್ನಬಹುದು.
ಗಣೇಶ್ ಅವರು ಕಾಮಿಡಿ ಟೈಮಿಂಗ್ಗೆ ಸಖತ್ ಫೇಮಸ್. ಅವರ ಕಾಮಿಡಿ ಟೈಮ್ ಶೋಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ ಎಂದು ಹೇಳಬಹುದು. ಗಣೇಶ್ ಅವರ ಬಳಿ ಈಗ ಎಲ್ಲವೂ ಇದೆ. ಆರ್ಆರ್ ನಗರದಲ್ಲಿ ಅವರು ಒಂದು ಮನೆಯನ್ನು ಖರೀದಿ ಮಾಡಿದ್ದಾರೆ. ಪತ್ನಿ ಹಾಗೂ ಮಕ್ಕಳ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.
2024ರಲ್ಲಿ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ಗಣೇಶ್ ಅವರು ‘ಯುವರ್ ಸಿನ್ಸಿಯರ್ಲಿ ರಾಮ್’ ಹಾಗೂ ‘ಪಿನಾಕ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಹೊಸ ಸಿನಿಮಾಗಳು ಇಂದು ಘೋಷಣೆ ಆಗುವ ನಿರೀಕ್ಷೆ ಇದೆ.