ಬೆಂಗಳೂರು : ಧರ್ಮದ ಆಧಾರದ ಮೇಲೆ ಜನರನ್ನು ಗುರುತಿಸಿ ಟಾರ್ಗೆಟ್ ಮಾಡಿದ್ದು ಕ್ರೂರ ಕೃತ್ಯವಾಗಿದೆ ಎಂದು ಸಚಿವ ಆರ್. ಬಿ. ತಿಮ್ಮಾಪುರ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ಕೃತ್ಯವನ್ನು ಇಂದು ಖಂಡಿಸಿದ್ದಾರೆ.

ನಿನ್ನೆ ಬಾಗಲಕೋಟೆಯಲ್ಲಿ ಪಹಲ್ಗಾಮ್ ಉಗ್ರರ ಅಟ್ಟಹಾಸ ವಿಚಾರವಾಗಿ ಮಾತನಾಡುತ್ತಾ, ಧರ್ಮ ಕೇಳಿ ಹೊಡೆಯೋಕಾಗುತ್ತಾ, ಧರ್ಮ ಕೇಳಿ ಹೊಡೆಯುವಷ್ಟು ವ್ಯವಧಾನ ಯಾರಿಗೂ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಚಿವರು, ಪಹಲ್ಗಾಮ್ನಲ್ಲಿ ಏಪ್ರಿಲ್ 22, 2025ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಿಂದ ಅಮಾಯಕ ಪ್ರವಾಸಿಗರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಭಾರತಕ್ಕೆ ಬಹುದೊಡ್ಡ ಆಘಾತವಾಗಿದೆ. ಇದು ಕೇವಲ ಭಯೋತ್ಪಾದನೆಯ ಕೃತ್ಯವಲ್ಲ. ಧರ್ಮದ ಆಧಾರದ ಮೇಲೆ ಜನರನ್ನು ಗುರುತಿಸಿ ಟಾರ್ಗೆಟ್ ಮಾಡಿರುವುದು ಘೋರ ಕೃತ್ಯವಾಗಿದೆ. ಇಂತಹ ಧಾರ್ಮಿಕ ಫ್ರೊಫೈಲಿಂಗ್ ನಮ್ಮ ಧರ್ಮನಿರಪೇಕ್ಷ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ದುರಂತ ಸಂದರ್ಭದಲ್ಲಿ, ಸಾವನ್ನಪ್ಪಿದವರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಅವರು ಏಕಾಂಗಿ ಇಲ್ಲ. ನಾವು ಎಲ್ಲರೂ ಒಂದಾಗಿ ಅವರೊಂದಿಗೆ ನಿಲ್ಲುತ್ತೇವೆ. ಆದರೆ ಈ ಸಂದರ್ಭದಲ್ಲಿ ಕೆಲ ಪ್ರಮುಖ ಪ್ರಶ್ನೆಗಳನ್ನೂ ಕೇಳಲೇಬೇಕು. ಈ ಹಲ್ಲೆಗೆ ಮುನ್ನ ಎಚ್ಚರಿಕೆ ನೀಡಬಹುದಾದ ಗುಪ್ತಚರ ಇಲಾಖೆಯಿಂದ ಮಾಹಿತಿ ಕೈ ತಪ್ಪಿರುವುದು ಸ್ಪಷ್ಟವಾಗಿದೆ. ಬೈಸರಾನ್ ವ್ಯಾಲಿಯನ್ನು ಸರಿಯಾದ ಭದ್ರತೆ ಇಲ್ಲದೆ ಎಡವಟ್ಟಾಗಿ ಪ್ರವಾಸಿಗರಿಗೆ ಮುಕ್ತಗೊಳಿಸಿದ ನಿರ್ಧಾರದಿಂದ ಭಯೋತ್ಪಾದಕರಿಗೆ ಅವಕಾಶ ಸಿಕ್ಕಂತಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಸಂಪೂರ್ಣ ಜವಾಬ್ದಾರಿ ಸ್ವೀಕರಿಸಬೇಕು ಹಾಗೂ ನಿಖರವಾದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅದಾಗ್ಯೂ, ಇದು ರಾಜಕೀಯ ಮಾಡುವ ಕಾಲವಲ್ಲ, ಭಯೋತ್ಪಾದನೆಯ ವಿರುದ್ದ ನಮ್ಮ ಹೋರಾಟ ಒಗ್ಗಟ್ಟಿನಿಂದಲೇ ನಡೆಯಬೇಕು. ಕೇಂದ್ರ ಸರ್ಕಾರವು ಈ ಕೃತ್ಯಕ್ಕೂ ಹೊಣೆಗಾರರಾದವರ ವಿರುದ್ಧ ಎಚ್ಚರಿಕೆಯಿಂದ ತಕ್ಷಣದ ಹಾಗೂ ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಸಾಂಕೇತಿಕತೆ ಅಲ್ಲ, ಆಕ್ರಮಣಶೀಲ ಪ್ರತಿಕ್ರಿಯೆ ಬೇಕು. ನಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಹಾಗೂ ಎಲ್ಲಾ ಧರ್ಮದವರು ಒಂದಾಗಿ ನಿಲ್ಲಬೇಕು. ಈ ದೇಶವನ್ನು ಹಿಂಸೆಯಿಂದ ಮುಕ್ತಗೊಳಿಸಿ ಸಹಬಾಳ್ವೆಯೊಂದಿಗೆ ಬದುಕಬೇಕು ಎಂದು ಸಚಿವರು ಕರೆ ನೀಡಿದ್ದಾರೆ.