ವಾರ್ಷಿಕ ₹800 ಕೋಟಿ ತೆರಿಗೆ ಪಾವತಿಸುವವರು ಆಕ್ರೋಶದೊಂದಿಗೆ ಸರ್ಕಾರಕ್ಕೆ ಪ್ರಶ್ನೆ.

ವಾರ್ಷಿಕ ₹800 ಕೋಟಿ ತೆರಿಗೆ ಪಾವತಿಸುವವರು ಆಕ್ರೋಶದೊಂದಿಗೆ ಸರ್ಕಾರಕ್ಕೆ ಪ್ರಶ್ನೆ.

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ರಸ್ತೆ ಗುಂಡಿಗಳ ವಿಚಾರ ಭಾರಿ ಚರ್ಚೆಯಲ್ಲಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಪೋಸ್ಟ್ ಬೆನ್ನಲ್ಲೇ ನಾವು ಆಸ್ತಿ ತೆರಿಗೆ ಕಟ್ಟುವುದಿಲ್ಲ ಮತ್ತು ನಮ್ಮಿಂದ ತೆರಿಗೆ ಕೇಳಬೇಡಿ ಎಂದು ಐಟಿ-ಬಿಟಿ ಮಂದಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಗೆ ಪತ್ರ ಬರೆದಿರುವ ಪ್ರಸಂಗ ನಡೆದಿದೆ. ವರ್ತೂರು ಮತ್ತು ಪಣತ್ತೂರು ಭಾಗದ ನಿವಾಸಿಗಳು ಪತ್ರ ಬರೆದಿದ್ದು, ಮೂಲ ಸೌಕರ್ಯ ಸಮಸ್ಯೆ ಬಗ್ಗೆ ಈ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ವರ್ತೂರು, ಪಣತ್ತೂರು ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಎಲ್ಲಿ ನೋಡಿದರೂ ಬರಿ ಗುಂಡಿಗಳೇ ಕಾಣುತ್ತಿವೆ. ಇಂತಹ ರಸ್ತೆಗಳಲ್ಲಿ ಸರಾಗವಾಗಿ ಸಂಚರಿಸಲು ಸಾಧ್ಯವಾಗದ ಕಾರಣ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಸ್ಕೂಲ್​ ಬಸ್​ಗಳ ಅಪಘಾತ ದಿನನಿತ್ಯ ಮಾಮೂಲು ಎಂಬಂತಾಗಿದೆ. ಗುಂಡಿ ಮುಕ್ತ ರಸ್ತೆ , ಮೂಲ ಸೌಕರ್ಯ ಕೊಟ್ಟು ತೆರಿಗೆ ಕೇಳಿ ಎಂದು Individual Tax Payers Forumನಿಂದ ಸಿಎಂ, ಡಿಸಿಎಂಗೆ ಪತ್ರ ಬರೆಯಲಾಗಿದೆ.

ರಸ್ತೆ ಸಮಸ್ಯೆ ಮಾತ್ರವಲ್ಲದೆ ಈ ಭಾಗದಲ್ಲಿ ಸಮರ್ಪಕ ಚರಂಡಿಗಳ ಕೊರತೆಯೂ ಇದೆ. ಮಳೆ ಬಂದರೆ ನೀರು ವರ್ತೂರು ಕೆರೆಗೆ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳು ಜಲಾವೃತವಾಗುತ್ತಿವೆ. ಇತ್ತೀಚೆಗೆ ಮಳೆ ಬಂದ ಸಂದರ್ಭವೂ ಇದೇ ರೀತಿಯ ಸಮಸ್ಯೆ ಉಂಟಾಗಿ, ಜನ ಜೀವನ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಸರಿಯಾದ ರಸ್ತೆ, ಒಳಚರಂಡಿ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸದ ಹಿನ್ನಲೆ ಗೃಹ ನಿರ್ಮಾಣ ಪ್ರಾಧಿಕಾರ ಅಥವಾ GBA ಆಸ್ತಿ ತೆರಿಗೆ ಸಂಗ್ರಹಿಸದಂತೆ ಆದೇಶಿಸಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಭಾಗದಿಂದ ವಾರ್ಷಿಕವಾಗಿ 800 ಕೋಟಿ ತೆರಿಗೆ ಪಾವತಿಯಾಗಲಿದ್ದು, ಇದೇ ವಿಚಾರವಾಗಿ ಈ ಹಿಂದೆ ಹಲವು ಬಾರಿ ಸ್ಥಳೀಯರು ಪ್ರತಿಭಟನೆಗಳನ್ನೂ ನಡೆಸಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *