ಬೆಂಗಳೂರು :ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಮಾನವ ಅಂಗಾಂಗಗವನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ರವಾನೆ ಮಾಡಲಾಯಿತು. ವೈಟ್ ಫೀಲ್ಡ್ನಲ್ಲಿರುವ ವೈದೇಹಿ ಆಸ್ಪತ್ರೆಯಿಂದ ಆರ್ಆರ್ ನಗರದ ಸ್ಪರ್ಶ ಆಸ್ಪತ್ರೆ ಮಾನವ ಅಂಗಾಂಗ ರವಾನೆ ಮಾಡಲಾಯಿತು. ಈ ಎರಡು ಆಸ್ಪತ್ರೆಗಳ ಅಂತರ ಸುಮಾರು 30 ಕಿ.ಮೀಟರ್ ಆಗಿದ್ದು, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸೇರಿದಂತೆ ಇನ್ನಿತರ ಅಡೆತಡೆಗಳಿಂದ ವಿಳಂಬ ಆಗುತ್ತದೆ ಎಂಬ ಕಾರಣದಿಂದ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮೆಟ್ರೋ ಆಯ್ಕೆ ಮಾಡಿದ್ದೇಕೆ?: ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ರಸ್ತೆಯ ಮೂಲಕ ತ್ವರಿತ ಅಂಗಾಂಗ ವರ್ಗಾವಣೆಗೆ ಸಾಮಾನ್ಯ ಅಡೆತಡೆಗಳಾದ ಸಂಚಾರ ವಿಳಂಬವನ್ನು ತಪ್ಪಿಸಲು ಮೆಟ್ರೋ ಸಾರಿಗೆಗಾಗಿ ಆಯ್ಕೆ ಮಾಡಲಾಗಿದೆ. ಬಿಎಂಆರ್ಸಿಎಲ್, ಆರೋಗ್ಯ ಇಲಾಖೆ, ಬೆಂಗಳೂರು ಪೊಲೀಸರು ಅಧಿಕಾರಿಗಳು ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಕಸಿಗಾಗಿ ಸಕಾಲಿಕ ವಿತರಣೆ ಖಚಿತಪಡಿಸಿಕೊಳ್ಳಲು ತಡೆರಹಿತ ಮೆಟ್ರೋ ಮಾರ್ಗವನ್ನು ಆಯ್ಕೆ ಮಾಡಿದರು.
ಕರ್ನಾಟಕದಲ್ಲಿ ಅಂಗಾಂಗ ಸಾಗಣೆಗೆ ಮೆಟ್ರೋ ರೈಲು ವ್ಯವಸ್ಥೆಯನ್ನು ಬಳಸಿದ ಮೊದಲ ನಿದರ್ಶನ ಇದಾಗಿದೆ. ಇದು ಬಿಎಂಆರ್ಸಿಎಲ್ ಮತ್ತು ಆರೋಗ್ಯ ಇಲಾಖೆ ಸಮನ್ವಯ ಸಾಧಿಸಿದ್ದರಿಂದ ಸಾಧ್ಯವಾಯಿತು. ರಸ್ತೆ ಮೂಲಕ ಅಂಗಾಗ ರವಾನೆಗೆ ವಿಳಂಬ ಆಗುತ್ತದೆ ಎಂಬ ಕಾರಣಕ್ಕೆ ಮೆಟ್ರೋ ಸಾರಿಗೆಯನ್ನು ನೀಡಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ದೃಢಪಡಿಸಿದರು. ಆರ್ಆರ್ ನಗರದಲ್ಲಿ ಸ್ಪರ್ಶ್ ಆಸ್ಪತ್ರೆ ಲಿವರ್ ಕಸಿಗೆ ಹೆಸರುವಾಸಿಯಾದ ಕಾರಣ ಇಲ್ಲಿಗೆ ರವಾನೆ ಮಾಡಲಾಯಿತು ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಯಾವುದೇ ಅಂಗಾಗ ಕಸಿಗೆ ವೈದ್ಯರ ಮಾಹಿತಿ ಪ್ರಕಾರ, ಇಷ್ಟು ಸಮಯ ಅಂತಾ ಇರುತ್ತದೆ. ಅದರೊಳಗೆ ಅಂಗಾಂಗವನ್ನು ತೆಗೆದುಕೊಂಡು ಬೇರೆಯವರಿಗೆ ಹಾಕಲಾಗುತ್ತದೆ. ಅದು ಮೃತಪಟ್ಟ ವ್ಯಕ್ತಿ, ಮುಂಚೆಯೇ ದಾನ ಮಾಡುತ್ತೇವೆ ಎಂದು ಸಹಿ ಮಾಡಿದ್ದರೆ ಮಾತ್ರ.
ಇನ್ನು ಈಗಾಗಲೇ ರಸ್ತೆ ಮಾರ್ಗವಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಂಗಾಂಗ ರವಾನಿಸಲಾದ ಘಟನೆಗಳು ತುಂಬಾ ನಡೆದಿವೆ. ಎಲ್ಲಾ ಅಡೆತಡೆಗಳನ್ನು ದಾಟಿಕೊಂಡು ಆಂಬ್ಯುಲೆನ್ಸ್ ಮೂಲಕ ಅತೀ ಕಡಿಮೆ ಸಮಯದಲ್ಲಿ ಸಾಗಿಸಿದ್ದು, ಇಂತಹ ಕಾರ್ಯಗಳಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿರುವ ಉದಾಹರಣೆಗಳಿವೆ. ಹಾಗೆಯೇ ಇದೀಗ ಯಾವುದೇ ಅಡೆತಡೆ ಆಗದಂತೆ ನಮ್ಮ ಮೆಟ್ರೋದಲ್ಲಿ ಮೊಟ್ಟ ಮೊದಲ ಬಾರಿ ನಗರದಲ್ಲಿನ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಂಗಾಗ ಸಾಗಿಸಿದ ಘಟನೆ ನಡೆದಿದೆ. ಕರ್ನಾಟಕದಲ್ಲೇ ಇದು ಮೊಟ್ಟ ಮೊದಲ ಪ್ರಯತ್ನವಾಗಿದ್ದು, ವೈದ್ಯರು ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಬೇರೆ ಊರುಗಳಿಗೆ ಪ್ರಯಾಣ ಮಾಡಬಹುದು, ಆದರೆ ಬೆಂಗಳೂರಿನಲ್ಲಿಯೇ ಪ್ರಯಾಣ ಮಾಡುವುದು ಅಷ್ಟು ಸುಲಭದ ಮಾತಲ್ಲ. ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಪ್ರತಿನಿತ್ಯ ಪರದಾಡುತ್ತಾರೆ. ಈ ಸಮಸ್ಯೆ ಆಗಬಾರದೆಂದು ವ್ಯದ್ಯಕೀಯ ಸಿಬ್ಬಂದಿ ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.