ಬೆಂಗಳೂರು: ಬೆಂಗಳೂರಿನಾದ್ಯಂತ ಅಬ್ಬರಿಸಿದ್ದ ಮಳೆರಾಯ ಕೊಂಚ ತಣ್ಣಗಾಗಿದ್ದಾನೆ. ಒಂದೆರಡು ದಿನಗಳಿಂದ ಮಳೆ ಕಡಿಮೆ ಆಗಿದ್ದು, ತಾಪಮಾನದಲ್ಲೂ ಬದಲಾವಣೆ ಆಗಿದೆ. ಮೇ 27ರವರೆಗೆ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಆಗಲಿದೆ. ಗುಡುಗು ಸಹಿತ ಅಲ್ಲಲ್ಲಿ ಜೋರು ಮಳೆಯ ಲಕ್ಷಣಗಳು ಇವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಸಮುದ್ರ ಭಾಗದ ಮೇಲ್ಮೈನಲ್ಲಿ ಚಂಡಮಾರುತ ಪ್ರಸರಣ ಉಂಟಾಗಿದೆ. ಈ ಕಾರಣದಿಂದಾಗಿ ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯಾದ್ಯಂತ ಜೋರು ಮಳೆ ಅಬ್ಬರಿಸುತ್ತಿದೆ. ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಸಹ ನೀಡಲಾಗಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆ ಕಡಿಮೆ ಆಗಿರಬಹುದು. ಆದರೆ ಮೇ 25ರ ನಂತರ ಪೂರ್ವ ಮುಂಗಾರು ಮತ್ತಷ್ಟು ಚುರುಕಾಗಲಿದೆ.
ಬೆಂಗಳೂರು ನಗರದಲ್ಲಿ ಮೇ 26ರಂದು ಸಾಧಾರಣದಿಂದ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ನಂತರ ಮೂರು ದಿನ (ಮೇ 27,28,29) ಮಳೆ ಮತ್ತಷ್ಟು ಹೆಚ್ಚಾಗಲಿದೆ. ಈ ಮೂರು ದಿನ ಗುಡುಗು ಮಿಂಚು ಸಹಿತ ಭಾರೀ ಮಳೆ ಅಬ್ಬರಿಸಲಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಇಂದು ಬೆಂಗಳೂರು ತಾಪಮಾನ ಎಷ್ಟಿದೆ? ನಗರದಲ್ಲಿ ಬೆಳಗ್ಗೆಯಿಂದ ಮಬ್ಬು ವಾತಾವರಣ ಕಂಡು ಬಂದಿದ್ದು, ಇಂದು ಶುಕ್ರವಾರ ನಂತರ ಅಲ್ಲಲ್ಲಿ ಹಗುರ ಇಲ್ಲವೇ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಇಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗರಿಷ್ಠ 29 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ (KIAL) ಗರಿಷ್ಠ 29 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಎಚ್ಎಎಲ್ ಏರ್ಪೋರ್ಟ್ ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಒಂದು ವಾರದ ನಗರದಲ್ಲಿ ಇದೇ ರೀತಿಯ ತಾಪಮಾನ ಕಂಡು ಬರಲಿದೆ.
ಮೇ 25ರ ನಂತರ ಭಾರೀ ಮಳೆ ಕಳೆದ ಭಾನುವಾರದಿಂದ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಅದರ ಬೆನ್ನಲ್ಲೆ ಬಿಬಿಎಂಪಿ ಪರಿಹಾರ ಕಾರ್ಯ ಕೈಗೊಂಡಿತ್ತು. ಇದೀಗ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅದರ ಬೆನ್ನಲ್ಲೆ ಮೇ 25ರ ನಂತರ ವ್ಯಾಪಕ ಮಳೆ ಆಗಲಿದೆ. ಇದು ಜನರ ನಿದ್ದೆಗೆಡಿಸಿದೆ. ಕರ್ನಾಟಕ ಹವಾಮಾನ ವರದಿ ಪ್ರಕಾರ, ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳು, ಕರಾವಳಿ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ಅತೀ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.