ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಬಹಳ ಕಡಿಮೆ ಜನರಿಗೆ ತಿಳಿದಿರುವ ಒಂದು ವಿಷಯವಿದೆ. ಹವಾಮಾನ ಬದಲಾವಣೆಗಳಿಗೆ ಅನುಗುಣವಾಗಿ ಕೆಲವು ತರಕಾರಿಗಳನ್ನು ಸೇವಿಸಬೇಕು ಮತ್ತು ಕೆಲವನ್ನು ಸೇವಿಸಬಾರದು. ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದರಿಂದ ಮಾತ್ರ ದೇಹವು ಬದಲಾಗುತ್ತಿರುವ ಋತುಗಳಿಗೆ ಹೊಂದಿಕೊಳ್ಳುತ್ತದೆ. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳು ಬಂದೆ ಬರುತ್ತೆ. ವಿಶೇಷವಾಗಿ ಮಳೆಗಾಲದಲ್ಲಿ, ಸೇವಿಸುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ರೋಗಗಳ ಅಪಾಯ ಹೆಚ್ಚು. ಪೌಷ್ಟಿಕತಜ್ಞೆ ಕಿರಣ್ ಕುಕ್ರೇಜಾ ಅವರು ಮಳೆಗಾಲದಲ್ಲಿ ಕೆಲವು ತರಕಾರಿಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ ಎಂದಿದ್ದಾರೆ. ಆ ತರಕಾರಿಗಳು ಯಾವುದು? ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಮ್ಮ ಇನ್ಸ್ಟಾಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ನಾವು ಮಳೆಗಾಲದಲ್ಲಿ ಯಾವ ತರಕಾರಿಗಳನ್ನು ಸೇವಿಸಬಾರದು ..? ಅದಕ್ಕೆ ಕಾರಣವೇನು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.

ಈ ಸಮಯದಲ್ಲಿ ಮುನ್ನೆಚ್ಚರಿಕೆ ಅಗತ್ಯ
ಮಳೆಗಾಲದಲ್ಲಿ, ತರಕಾರಿಗಳನ್ನು ಸೇವಿಸುವ ಮೊದಲು ಒಂದು ಅಥವಾ ಎರಡು ಬಾರಿ ಪರಿಶೀಲಿಸುವುದು ಅವಶ್ಯಕ. ಕಾರಣವೇನೆಂದರೆ ಈ ಸಮಯದಲ್ಲಿ ಬ್ಯಾಕ್ಟೀರಿಯಾ ಮತ್ತು ಕೀಟಗಳು ಹೆಚ್ಚು ಸಕ್ರಿಯವಾಗಿರುತ್ತವೆ. ಅವು ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ ಇದರಿಂದ ಅವು ಬೇಗನೆ ಹರಡಬಹುದು. ಅಷ್ಟೇ ಅಲ್ಲ, ಮಳೆಗಾಲದಲ್ಲಿ ತರಕಾರಿಗಳ ಮೇಲೆ ಅತಿಯಾದ ತೇವಾಂಶವೂ ಇರುತ್ತದೆ. ಇದು ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಕೀಟಗಳು ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ನಿಮಗೆ ತಿಳಿದಿರಬಹುದು, ಮಣ್ಣಿನಲ್ಲಿ ಬೆಳೆಯುವ ಕೆಲವು ರೀತಿಯ ತರಕಾರಿಗಳು ಬಹಳಷ್ಟು ನೀರನ್ನು ಹೀರಿಕೊಳ್ಳುತ್ತವೆ. ಅವುಗಳಲ್ಲಿ ಕೀಟಗಳು ಇರುವ ಅಪಾಯ ಹೆಚ್ಚಾಗಿರುತ್ತದೆ. ಅಂತಹ ತರಕಾರಿಗಳನ್ನು ಸೇವಿಸುವುದರಿಂದ ವಿವಿಧ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಸೋಂಕು, ಗ್ಯಾಸ್, ಹೊಟ್ಟೆ ಉಬ್ಬುವುದು ಮತ್ತು ಆಹಾರವೇ ವಿಷವಾಗುವ ಅಪಾಯವೂ ಇದೆ. ಅದಕ್ಕಾಗಿಯೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.