ಬಂಗಾರಪೇಟೆ: ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತನಿಮಡಗು ಗ್ರಾಮದ ರಸ್ತೆಯು ಗುಂಡಿಮಯವಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಸಾನತ್ತಂ ರೈಲು ನಿಲ್ದಾಣ, ರಾಮಸಂದ್ರ, ಬೋಡಗೊರ್ಕಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿಮಯವಾಗಿದೆ.
ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಜೊತೆಗೆ ಹಲವು ವಾಹನ ಸವಾರರು ಆಯತಪ್ಪಿ, ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಪ್ರತಿನಿತ್ಯ ಶಾಲಾ-ಕಾಲೇಜಿಗೆ ಮಕ್ಕಳು ಮತ್ತು ಹಿರಿಯರು, ವ್ಯಾಪಾರ ವಹಿವಾಟುಮತ್ತು ಕೆಲಸಕ್ಕಾಗಿ ಹತ್ತಾರು ಮಂದಿ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ, ಗುಂಡಿ ಬಿದ್ದು ವರ್ಷಗಳೇ ಕಳೆದಿದ್ದರೂ, ರಸ್ತೆ ದುರಸ್ತಿಗೆ ಸಂಬಂಧಿಸಿದ ಅಧಿಕಾರಿಗಳಾಗಲೀ ಅಥವಾ ಜನಪ್ರತಿನಿಧಿಗಳು ಈವರೆಗೂ ಮುಂದಾಗಿಲ್ಲ. ದೊಡ್ಡ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.
ರಸ್ತೆಯ ಡಾಂಬರೀಕರಣ ಕಿತ್ತುಹೋಗಿರುವ ಪರಿಣಾಮ ಮಳೆಗಾಲದಲ್ಲಿ ರಸ್ತೆ ಪೂರ್ತಿ ಕೆಸರುಗದ್ದೆಯಂತಾಗುತ್ತದೆ. ಕೆಲವು ಕಡೆಗಳಲ್ಲಿ ಮೊಳಕಾಲು ಉದ್ದದಷ್ಟು ನೀರು ನಿಲ್ಲುವುದರಿಂದ ರಸ್ತೆ ಎಲ್ಲಿದೆ ಮತ್ತು ತಗ್ಗು ಎಲ್ಲಿದೆ ಎಂಬುದೇ ಗೊತ್ತಾಗುವುದಿಲ್ಲ. ಹಲವು ಬಾರಿ ವಾಹನ ಸವಾರರು ಬಿದ್ದು, ಗಾಯಗೊಂಡಿರುವ ಉದಾಹರಣೆಗಳು ಇವೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವ ಒತ್ತಾಯಿಸಿದರು.
-ಅಶೋಕ, ಪ್ರಯಾಣಿಕಬಿಸಾನತ್ತ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದರಿಂದ ನಿತ್ಯ ಪ್ರಯಾಣಿಕರು ಹರಸಾಹಸಪಡುವಂತಾಗಿದೆ. ಸಂಬಂಧಿಸಿದವರು ಈ ರಸ್ತೆಯನ್ನು ಶೀಘ್ರವೇ ದುರಸ್ತಿಗೊಳಿಸಬೇಕು. -ರಾಜೇಂದ್ರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಂಪರ್ಕ ರಸ್ತೆಯಲ್ಲಿ ಪ್ರತಿನಿತ್ಯ ವಾಹನಗಳ ಸಂಚಾರದಿಂದ ತಗ್ಗು ಗುಂಡಿಗಳು ಬಿದ್ದಿವೆ. ಪ್ರಯಾಣಿಕರಿಗೆ ತೊಂದರೆಯಾಗಿದೆ. ರಸ್ತೆ ದುರಸ್ತಿ ಮಾಡುವ ಜರೂರತ್ತು ಇದೆ.