ತುಮಕೂರು :- ಮಗ್ಗುಲಲ್ಲೇ ಇರುವ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ತುಮಕೂರು ಜಿಲ್ಲೆಗೂ ಎಚ್ಚರಿಕೆ ಗಂಟೆ ಎನಿಸಿದ್ದು, ಜಿಲ್ಲೆಯಾದ್ಯಂತ ಇಂದಿನಿಂದ ಕೋವಿಡ್ ಪರೀಕ್ಷೆಯನ್ನು ಆರೋಗ್ಯ ಇಲಾಖೆ ಆರಂಭಿಸಿದೆ.

ಸತತ ಮರ‍್ನಾಲ್ಕು ವರ್ಷಗಳಿಂದ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಮಹಾಮಾರಿ ಕೋವಿಡ್ ಮತ್ತೆ ವ್ಯಾಪಿಸುತ್ತಿರುವ ಬೆನ್ನಲ್ಲೇ ಜಿಲ್ಲೆಯ ಜಿಲ್ಲಾಡಳಿತ ಅಗತ್ಯ ಸಿದ್ಧತಾ ಕ್ರಮ ಕೈಗೊಂಡಿದೆ. ಜಿಲ್ಲೆಯ ಮೇಲೆ ಮತ್ತೆ ಹೊಸ ರೂಪಾಂತರಿ ತಳಿಯ ಕೋವಿಡ್ ಕರಿನೆರಳು ಬೀಳದಂತೆ ದಿಟ್ಟ ಕ್ರಮವನ್ನ ಇಟ್ಟಿದೆ.
ಜಿಲ್ಲಾಸ್ಪತ್ರೆ ಸೇರಿದಂತೆ 9 ತಾಲೂಕು ಆಸ್ಪತ್ರೆ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ ಕೋವಿಡ್ ಪರೀಕ್ಷೆಯನ್ನು ಆರೋಗ್ಯ ಇಲಾಖೆ ಆರಂಭಿಸಿದೆ. ಕಟ್ಟುನಿಟ್ಟಾಗಿ ಕೋವಿಡ್ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಈಗಾಗಲೇ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸೂಚಿಸಿರುವ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನ ಜಿಲ್ಲೆಯಾದ್ಯಂತ ಅನುಷ್ಠಾನಕ್ಕೆ ತಂದಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ರೂಂ ಕೊಠಡಿ ಮಾಡಲು ಕ್ರಮ ಕೈಗೊಂಡಿದ್ದು, ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಎಲ್ಲವೂ ಇದ್ದು, ಅವುಗಳ ಸುಸ್ಥಿತಿಯನ್ನ ಪರೀಕ್ಷಿಸಿದೆ. ಕೋವಿಡ್ ಪ್ರಕರಣ ಕಂಡುಬಂದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಾದ್ಯಂತ ಇಂದಿನಿಂದ ಆರಂಭವಾಗಿರುವ ಕೋವಿಡ್ ಪರೀಕ್ಷೆಯನ್ನು ಎಲ್ಲರಿಗೂ ಮಾಡುವುದಿಲ್ಲ. ಬಹು ಕಾಯಿಲೆಯಿರುವವರಿಗೆ, ಕೆಮ್ಮು, ಶೀತಾ, ನೆಗಡಿ, ಜ್ವರ ಲಕ್ಷಣ ಇರುವವರಿಗೆ, ಗರ್ಭಿಣಿಯರಿಗೆ, ವಯಸ್ಸಾದವರಿಗೆ, ಕೋವಿಡ್ ಲಕ್ಷಣ ಇರುವವರಿಗೆ ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಪರೀಕ್ಷೆ ಮಾಡಿದ ಸ್ಯಾಂಪಲ್ಲನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತದೆ.
ಮುಂಜಾಗ್ರತಾ ಕ್ರಮ ವಹಿಸಿ:- ಶೀತ, ನೆಗಡಿ, ಜ್ವರ ಇರುವ ತಮ್ಮ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಉತ್ತಮ. ಸಾರ್ವಜನಿಕರು ಆಗಾಗೆ ಸಾಬೂನಿನಿಂದ ಅಥವಾ ಸ್ಯಾನಿಟೈಸರ್ ನಿಂದ ಕೈ ತೊಳೆಯಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ ಉಪಯೋಗಿಸಬೇಕು. ಯಾವುದೇ ತರಹದ ಕೆಮ್ಮು, ನೆಗಡಿ, ಗಂಟಲು ನೋವು, ಜ್ವರ ಕಂಡುಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭೀಣಿ ಸ್ತ್ರೀಯರಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ರಾಜ್ಯದ ಮಾರ್ಗಸೂಚಿಯಂತೆ ತೀವ್ರ ಉಸಿರಾಟದ ತೊಂದರೆ ಇರುವವರಿಗೆ ಹಾಗೂ ಗರ್ಭೀಣಿಯರು, ಮಕ್ಕಳು, ವೃದ್ದರಲ್ಲಿ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರ ಸಲಹೆ ಮೇರೆಗೆ ಕೋವಿಡ್ ನ ಪರೀಕ್ಷೆ ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಕೋವಿಡ್ ಬಾರದಂತೆ ಮುಂಜಾಗ್ರತಾ ಕ್ರಮ ಅಗತ್ಯ
ತುಮಕೂರು ಜಿಲ್ಲೆ ಬೆಂಗಳೂರಿಗೆ ಪರ್ಯಾವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ತುಮಕೂರು ನಡುವೆ ನಿತ್ಯ ಸಹಸ್ರಾರು ಉದ್ಯೋಗಸ್ಥರು, ಪ್ರಯಾಣಿಕರು ರೈಲು ಮತ್ತು ಬಸ್ಸುಗಳಲ್ಲಿ ಸಂಚಾರ ಮಾಡುತ್ತಾರೆ. ಹೀಗಾಗಿ ತುಮಕೂರು ಜಿಲ್ಲೆಗೆ ಕೋವಿಡ್ ಕರಿನೆರಳು ಕಾಡುವ ಸಾಧ್ಯತೆ ಹೆಚ್ಚಾಗಿದೆ. ಪರಿಣಾಮ ಆರೋಗ್ಯ ಇಲಾಖೆ ಹೆಚ್ಚಿನ ತಯಾರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಇಲ್ಲವೆಂದು ಕೂರದೇ, ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಳ್ಳದಂತೆ ಅಲರ್ಟ್ ಆಗಬೇಕಾಗಿದೆ. ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಹೋದಲ್ಲಿ ಕೋವಿಡ್ ತುಮಕೂರಿಗೆ ವ್ಯಾಪಿಸುವ ಸಾಧ್ಯತೆಯಿದೆ. ಹಾಗಾಗಿ ಅದಕ್ಕೂ ಮುನ್ನವೇ ಜಿಲ್ಲಾಡಳಿತ ಅಲರ್ಟ್ ಆಗಬೇಕಾಗಿದೆ.
ತುಮಕೂರು ಜಿಲ್ಲೆಯಾದ್ಯಂತ ಈವರೆಗೆ ಯಾವುದೇ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ ಜಿಲ್ಲೆಯ ಜನ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಗತ್ಯ ಸಿದ್ಧತಾ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚನೆ ಕೊಟ್ಟಿದೆ. ಆ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ 7 ಸಾವಿರ ಲೀಟರ್ ಪರ್ ಮಿನಿಟ್ ಆಕ್ಸಿಜನ್ ಪ್ರಡ್ಯೂಸ್ ಮಾಡುವ ಸಾಮರ್ಥ್ಯವಿದೆ. 15ಆಕ್ಸಿಜನ್ ಆಕ್ಸಿಜನ್ ಪ್ಲಾಂಟ್‌ಗಳಲ್ಲಿ 13 ಕಾರ್ಯನಿರ್ವಹಣೆಯಲ್ಲಿದೆ. ತಾಲೂಕು ಆಸ್ಪತ್ರೆ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಮತ್ತು ವೆಂಟಿಲೇಟರ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. 700 ಆಕ್ಸಿಜನ್ ಕಾಂನ್ಸಟ್ರೇಟರ್ ಇದೆ. ಜಿಲ್ಲೆಯಲ್ಲಿ ಮೂರು ಆರ್‌ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ ಇದೆ. 450 ಟೆಸ್ಟ್ ಒಂದು ದಿನಕ್ಕೆ ಮಾಡಬಹುದು. ಕೋವಿಡ್ ಪರೀಕ್ಷೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದ್ದಾರೆ.



