ತುಮಕೂರು: ತುಮಕೂರು ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಸುಮಾರು 12 ಅಡಿ ಎತ್ತರದ ಬಾಬಾ ಸಾಹೇಬರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸುವ ಮೂಲಕ ಜಿಲ್ಲೆಯ ದಲಿತರ ಬಹುದಿನಗಳ ಬೇಡಿಕೆ ಈಡೇರಿದೆ. ಇದಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರುಗಳನ್ನು ದಲಿತ ಸಂಘಟನೆಗಳ ಪರವಾಗಿ ಅಭಿನಂದಿಸುವುದಾಗಿ ದಲಿತ ಮುಖಂಡ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆಚಂದ್ರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಹತ್ತಿರದಲ್ಲಿರುವ ಮತ್ತು ಅತಿ ಹೆಚ್ಚು ದಲಿತ ಜನಸಂಖ್ಯೆಯನ್ನು ಹೊಂದಿರುವ ತುಮಕೂರು ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕೆಂಬುದು ಸುಮಾರು 45 ವರ್ಷಗಳ ಬೇಡಿಕೆಯಾಗಿತ್ತು. ಹಲವಾರು ಶಾಸಕರು, ಉಸ್ತುವಾರಿ ಮಂತ್ರಿಗಳು ಬಂದರೂ ದಲಿತರ ಈ ಆಸೆ ಈಡೇರಿರಲಿಲ್ಲ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ತಮ್ಮ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೂಲಕ ಸುಮಾರು 39 ಲಕ್ಷ ರೂಗಳನ್ನು ಖರ್ಚು ಮಾಡಿ, ಪ್ರತಿಮೆ ಸ್ಥಾಪನೆಗೆ ಇದ್ದ ಅಡೆತಡೆಗಳನ್ನು ನಿವಾರಿಸಿ, ಫೆ.14 ರಂದು ಲೋಕಾರ್ಪಣೆ ಮಾಡುತಿದ್ದಾರೆ. ಇದಕ್ಕಾಗಿ ಡಾ.ಜಿ.ಪರಮೇಶ್ವರ್ ಅವರನ್ನು ದಲಿತ ಸಂಘಟನೆಗಳ ಪರವಾಗಿ ಅಭಿನಂದಿಸಲಾಗುವುದು ಎಂದರು.
ಜಿಲ್ಲೆಯಲ್ಲಿರುವ ದಲಿತ ಸಮುದಾಯದ ಎಡ ಬಲ ಸಮುದಾಯಗಳು ಒಗ್ಗೂಡಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ಮುಖಂಡರಿಗೆ ರಾಜಕೀಯ ಸ್ಥಾನಮಾನ ದಕ್ಕುವಂತೆ ಮಾಡಿದೆ.ಏಪ್ರಿಲ್ 14 ರಂದು ನಡೆಯುವ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಟಾಪನೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು, ಈ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಗ್ರಾಮಾಂತರ ಜನರಿಗೆ ಅವಕಾಶ ಮಾಡಿಕೊಟ್ಟಿದ್ದು, ಅಂದು ತಮ್ಮ ಗ್ರಾಮಗಳಿಗೆ ಬರುವ ಬಸ್ಸುಗಳನ್ನು ಹತ್ತಿಕೊಂಡು ಬಂದು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು.ಅದೇ ರೀತಿ ಗ್ರಾಮೀಣ ಭಾಗದ ಕಲಾವಿದರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದು, ಕಲಾವಿದರ ಆಗಮಿಸಿ ತಮ್ಮ ಕಲೆಯನ್ನು ಪ್ರದರ್ಶಿಸುವಂತೆ ವಾಲೆಚಂದ್ರಯ್ಯ ಮನವಿ ಮಾಡಿದರು.
ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ,ಸುಮಾರು 4 ದಶಕಗಳ ಬೇಡಿಕೆಯನ್ನು ಡಾ.ಜಿ.ಪರಮೇಶ್ವರ್ ಈಡೇರಿಸಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜನರು ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಹೊಸ ಸಂದೇಶವೊಂದನ್ನು ನೀಡುವ ಕೆಲಸ ಮಾಡಬೇಕು ಎಂದರು.
ಮುಖಂಡ ನಾಗರಾಜ್ ಗೂಳರಿವೆ ಮಾತನಾಡಿ, ನಗರಪಾಲಿಕೆ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸಂತೋಷದ ವಿಚಾರ. ಹಾಗೆಯೇ ನೆನೆಗುದಿಗೆ ಬಿದ್ದಿರುವ ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಮತ್ತು ಪುತ್ಥಳಿ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರು ಅದ್ಯತೆ ನೀಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಂ ಅವರು ದಲಿತ ಸಮುದಾಯದ ಕಣ್ಣುಗಳಿದ್ದಂತೆ. ಹಾಗಾಗಿ ಎರಡು ಪ್ರತಿಮೆಗಳ ಸ್ಥಾಪನೆಗೆ ಮುಂದಾಗುವಂತೆ ಮನವಿ ಮಾಡಿದರು.
ಕೊಡಿಯಾಲ ಮಹದೇವ್ ಮಾತನಾಡಿ, ಜಿಲ್ಲಾಡಳಿತ ದಲಿತರ ಹಲವು ದಶಕಗಳ ಹೋರಾಟಕ್ಕೆ ಸ್ಪಂದಿಸಿ, ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುತ್ತಿದೆ.ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಜಾತಿ, ಜನಾಂಗದ ಜನರು ಸಾಕ್ಷಿಭೂತರಾಗಬೇಕು. ಜಾನಪದ ಕಲಾವಿದರು ಹೆಚ್ಚಿನ ಮೆರಗು ನೀಡುವ ಸಲುವಾಗಿ ಸ್ವಯಂ ಪ್ರೇರಿತರಾಗಿ ಆಗಮಿಸುವಂತೆ ಮನವಿ ಮಾಡಿದರು.
ಮುಖಂಡರಾದ ಬಂಡೆ ಕುಮಾರ್ ಮಾತನಾಡಿ, ಅಂಬೇಡ್ಕರ್ ಎಂದರೆ ಕೇವಲ ಎಸ್ಸಿ, ಎಸ್ಟಿ ಜನಾಂಗಕ್ಕೆ ಸವಲತ್ತು ನೀಡಿಲ್ಲ. ಪ್ರತಿಯೊಂದು ಸಮುದಾಯವೂ ಸಂವಿಧಾನದ ಅಡಿಯಲ್ಲಿ ಸವಲತ್ತು ಪಡೆಯುತ್ತಿದೆ.ಹಾಗಾಗಿ ಈ ಕಾರ್ಯಕ್ರಮದಲ್ಲಿ ಎಲ್ಲಾ ಜನಾಂಗದವರು ಪಾಲ್ಗೊಳ್ಳುವಂತೆ ಕೆರೆ ನೀಡಿದರು.
ಸುದ್ದಿಗೋಷ್ಠಿ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್,ಅಟ್ರಾಸಿಟಿ ಸಮಿತಿ ಸದಸ್ಯ ಕೋರ ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.