ತುಮಕೂರು: ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಪ್ರಕರಣ ಇಡೀ ದೇಶಾದ್ಯಂತ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ಇದೀಗ ಅಂಬೇಡ್ಕರ್ ಅಭಿವೃದ್ದಿ ನಿಗಮದ ಸರದಿ ಬಂದಿದೆ. ನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ದಿ ನಿಗಮದ ಕರ್ಮಕಾಂಡ ಬಯಲಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮದ ವಾಸನೆ ಬರುತ್ತಿದೆ. ಮಾಜಿ ಜಿಲ್ಲಾ ವ್ಯವಸ್ಥಾಪಕಿ ಯಡವಟ್ಟಿನಿಂದ 34 ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ.

34 ಫಲಾನುಭವಿಗಳು ಹೈರಾಣು
ಜಿಲ್ಲೆಗೆ ಟೆಂಡರ್ ಸಿಗದ ಕಂಪನಿಗೆ ಬೋರ್ವೆಲ್ ಕೊರೆಯಲು ಮಾಜಿ ಜಿಲ್ಲಾ ವ್ಯವಸ್ಥಾಪಕಿ ಸರೋಜಾದೇವಿ ವೈಯಕ್ತಿಕವಾಗಿ ಆದೇಶ ಹೊರಡಿಸಿದ್ದಾರೆ. ಬೋರ್ವೆಲ್ ಕೊರೆದು 4 ವರ್ಷ ಕಳೆದರೂ ಇವರೆಗೆ ಮೋಟರ್ ಪಂಪ್ ಸೆಟ್ ಹಾಗೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಹೀಗಾಗಿ ಕಳೆದ 4 ವರ್ಷದಿಂದ ಅಂಬೇಡ್ಕರ್ ನಿಗಮದ ಕಚೇರಿಗೆ ಅಲೆದು ಅಲೆದು 34 ಫಲಾನುಭವಿಗಳು ಹೈರಾಣಾಗಿದ್ದಾರೆ.
ಗುಬ್ಬಿ ತಾಲೂಕಿನ 32 ಹಾಗೂ ತುರುವೇಕೆರೆ ತಾಲೂಕಿನ ಇಬ್ಬರು ಸೇರಿದಂತೆ ಒಟ್ಟು 34 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲಾಗಿತ್ತು. ಆದರೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಹಾಗಾಗಿ ಅಡಿಕೆ, ತೆಂಗಿನ ಗಿಡ ಇನ್ನಿತರ ಬೆಳೆ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.
