ಯುವಶಕ್ತಿ ಅಣುಶಕ್ತಿಗಿಂತ ಮಿಗಿಲು: ಈಶ್ವರ ಖಂಡ್ರೆ ಕರೆ

ಯುವಶಕ್ತಿ ಅಣುಶಕ್ತಿಗಿಂತ ಮಿಗಿಲು: ಈಶ್ವರ ಖಂಡ್ರೆ ಕರೆ

ವೀರಶೈವ ಮಹಾಸಭಾ ಪದಗ್ರಹಣ ಸಮಾರಂಭ

ಬೆಂಗಳೂರು : ಯುವಶಕ್ತಿ ಅಣುಶಕ್ತಿಗಿಂತಲೂ ಮಿಗಿಲಾಗಿದ್ದು, ಅವರು ಮನಸ್ಸು ಮಾಡಿದರೆ ನವ ಸಮಾಜದ ನಿರ್ಮಾಣ ಮಾಡಬಹುದು. ಹೀಗಾಗಿ ಯುವಜನರನ್ನು ದುಶ್ಚಟ, ದುರ್ಗುಣಗಳಿಂದ ಮುಕ್ತಗೊಳಿಸಿ, ಆ ಅದ್ಭುತ ಶಕ್ತಿಯನ್ನು ಸುಂದರ ಸಮಾಜದ ನಿರ್ಮಾಣಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.

ಬೆಂಗಳೂರು ಪುರಭವನದಲ್ಲಿಂದು ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಯುವಜನರು ರೀಲ್ಸ್ ಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಮದ್ಯ, ಧೂಮಪಾನ, ಮಾದಕದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ಇವರನ್ನು  ಸರಿದಾರಿಗೆ ತರುವ ಕಾರ್ಯವನ್ನು ಯುವಘಟಕ ಮತ್ತು ಮಹಿಳಾ ಘಟಕ ಮಾಡಬೇಕು ಎಂದರು.

ಯುವ ಘಟಕ ಮತ್ತು ಮಹಿಳಾ ಘಟಕಗಳ ಪದಾಧಿಕಾರಿಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಾಜ್ಯದ ಮೂಲೆ ಮೂಲೆಯಲ್ಲಿರುವ ಸಮುದಾಯದ ಯುವಜನರನ್ನು ಸಂಪರ್ಕಿಸಿ, ಅವರನ್ನು ಸದಸ್ಯರನ್ನಾಗಿ ಮಾಡುವುದರ ಜೊತೆಗೆ, ಅವರ ಕೌಶಲ್ಯವರ್ಧನೆಗೆ ನೆರವಾಗಬೇಕು.

ನಮ್ಮ ಸಮಾಜದ ಹಿರಿಮೆ ಹೇಳಿಕೊಂಡು ಓಡಾಡಿದರೆ ಪ್ರಯೋಜನವಾಗುವುದಿಲ್ಲ. ವರ್ತಮಾನದಲ್ಲಿ ನಾವು ಎಲ್ಲಿ ನಿಂತಿದ್ದೇವೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು. ಪರಿಶ್ರಮದಿಂದ ಮೇಲೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪೂರ, ಶಾಸಕರುಗಳಾದ ವಿಜಯಾನಂದ ಕಾಶೆಪ್ಪನವರ್,  ಮಾಜಿ ಸಚಿವೆ ರಾಣಿ ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶೆಪ್ಪನವರ್, ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *