ಮಹಿಳೆಯರೇ ಎಚ್ಚರ..! ನೀವು ರಾತ್ರಿ ಕಡಿಮೆ ನಿದ್ದೆ ಮಾಡ್ತೀರಾ? ಹಾಗಿದ್ರೆ ಈ ಖಾಯಿಲೆ ಬರ್ಬೋದು ಹುಷಾರ್..!
ಇತ್ತೀಚಿನ ದಿನಗಳಲ್ಲಿ ಜನರಿಗೆ ನಿದ್ದೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಸದಾ ಕೆಲಸ, ಓಡಾಟ ಎನ್ನುವ ಜಂಜಾಟದಲ್ಲಿ ಸುಖ ನಿದ್ದೆಯಲ್ಲಿ ಜಾರಿ ನೆಮ್ಮದಿಯಿಂದ ನಿದ್ರಿಸುವುದೇ ಕಡಿಮೆಯಾಗಿದೆ.
ನಮ್ಮ ದೇಶದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ಅತೀ ಕಡಿಮೆ ನಿದ್ದೆ ಮಾಡುತ್ತಾರೆ. ರಾತ್ರಿಹೊತ್ತು ತಡವಾಗಿ ಮಲಗಿ ಬೇಗನೆ ಏಳುತ್ತಾರೆ. ಈ ರೀತಿಯಾಗಿ ಕಡಿಮೆ ನಿದ್ದೆ ಮಾಡುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಅದರಲ್ಲಿಯೂ ಮುಖ್ಯವಾಗಿ ಹೃದಯಕ್ಕೆ ಹಾನಿಕಾರಕವಾಗಿದೆ. ಏಳು ಗಂಟೆಗಿಂತ ಕಡಿಮೆ ನಿದ್ದೆ ಅಧಿಕ ರಕ್ತದೊತ್ತಡ ಅಪಾಯವನ್ನು ಶೇಕಡಾ 7 ರಷ್ಟು ಹೆಚ್ಚು ಮಾಡುತ್ತದೆ. ಅದೇ ಐದು ಗಂಟೆಗಿಂತ ಕಡಿಮೆ ನಿದ್ದೆ ಶೇಕಡಾ 11ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಮನುಷ್ಯನು ಸದಾ ಆರೋಗ್ಯದಿಂದ ಜೀವಿಸಲು ನಿದ್ದೆಯು ಬಹಳ ಮುಖ್ಯವಾಗಿದೆ. ರಾತ್ರಿ ನಿದ್ದೆ ಚೆನ್ನಾಗಿ ಆದಾಗ ಮಾತ್ರ ದಿನವಿಡೀ ಉತ್ಸಾಹದಿಂದ ಇರಲು ಸಾಧ್ಯ. ಉತ್ತಮ ನಿದ್ದೆ ಅದರಲ್ಲಿಯೂ ವಿಶೇಷವಾಗಿ ರಾತ್ರಿಯ ನಿದ್ದೆ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಹೃದಯ, ರಕ್ತನಾಳದ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಕಡಿಮೆ ಮಲಗುವುದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ತೋರಿಸಿಕೊಟ್ಟಿದೆ. ಇದು ಕ್ರಮೇಣ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಅಧ್ಯಯನದ ಪ್ರಕಾರ, ಏಳು ಗಂಟೆಗಳಿಗಿಂತ ಕಡಿಮೆ ನಿದ್ದೆ ಆರೋಗ್ಯವನ್ನು ಹಾಳು ಮಾಡಲು ಮೂಲ ಕಾರಣವಾಗಿದೆ.
ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ಮನುಷ್ಯನ ಜೀವಿತಾವಧಿ ಹೆಚ್ಚಾಗುತ್ತದೆ ಹೃದ್ರೋಗಗಳು ಬರುವುದಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಕಡಿಮೆ ನಿದ್ದೆ ಮಾಡುವವರು ರಕ್ತದೊತ್ತಡ ಸಮಸ್ಯೆಯನ್ನು ಅವರೇ ಆಹ್ವಾನಿಸಿದಂತೆ. ಇದರ ಅಡ್ಡ ಪರಿಣಾಮದಿಂದ ಹೃದ್ರೋಗಗಳು ಬರುತ್ತವೆ.
ಉತ್ತಮ ಆರೋಗ್ಯಕ್ಕೆ ಏಳರಿಂದ ಎಂಟು ಗಂಟೆಗಳ ನಿದ್ದೆ ಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ನಿದ್ದೆಯಲ್ಲಿ ಆಗಾಗ ಎಚ್ಚರಗೊಳ್ಳುವುದು, ಕಳಪೆ ನಿದ್ರೆಯು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದು 16 ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಕಡಿಮೆ ನಿದ್ದೆ ಮಾಡುವವರು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಾರೆ. ಅಲ್ಲದೆ ಈ ಅಧ್ಯಯನದ ಪ್ರಕಾರ, ಕಡಿಮೆ ನಿದ್ದೆ ಮಾಡಿದರೆ ಭವಿಷ್ಯದಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೀಗಾಗಿ ಪ್ರತಿದಿನ ಏಳರಿಂದ ಎಂಟು ಗಂಟೆಗಳ ನಿದ್ದೆ ಹೃದಯದ ಆರೋಗ್ಯಕ್ಕೆ ಉತ್ತಮ. ಅಂತೆಯೇ, ಮಧುಮೇಹ ಮತ್ತು ಧೂಮಪಾನವು ಅಧಿಕ ರಕ್ತದೊತ್ತಡದ ಅಪಾಯವನ್ನು ಶೇಕಡಾ 20 ರಷ್ಟು ಹೆಚ್ಚಿಸುತ್ತದೆ.