ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕಳೆದ ಕೆಲವು ವರ್ಷಗಳಿಂದ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿಯಾದವರು. ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದಾಗ ಚಾಹಲ್ ಫುಲ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಆ ಸಮಯದಲ್ಲಿ, ಚಾಹಲ್ ಸಾಮಾಜಿಕ ಮಾಧ್ಯಮದಲ್ಲಿಯೂ ಸಹ ಸಾಕಷ್ಟು ಟ್ರೋಲ್ ಆಗಿದ್ದರು. ಧನಶ್ರೀ ಅವರಿಂದ ವಿಚ್ಛೇದನ ಪಡೆದ ನಂತರ ಜನರು ಇವರನ್ನು “ವಂಚಕ” ಎಂದು ಕರೆದರು. ಇದೀಗ ಚಾಹಲ್ ಇತ್ತೀಚಿನ ಸಂದರ್ಶನದಲ್ಲಿ, ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ ಮತ್ತು ಆ ಸಮಯದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳ ಬೇಕು ಎಂದು ಆಲೋಚಿಸುತ್ತಿದ್ದೆ ಎಂಬ ಆಘಾತಕಾರಿ ವಿಚಾರ ಹೇಳಿದ್ದಾರೆ.
ರಾಜ್ ಶಮ್ನಿ ಅವರ ಪಾಡ್ಕ್ಯಾಸ್ಟ್ನಲ್ಲಿ ತಮ್ಮ ಮನದಾಳದ ಮಾತುಗಳನ್ನು ಆಡಿದ ಚಾಹಲ್, ಧನಶ್ರೀ ವರ್ಮಾ ಅವರಿಂದ ವಿಚ್ಛೇದನದ ನಂತರ ತಮ್ಮನ್ನು “ವಂಚಕ” ಎಂದು ತಪ್ಪಾಗಿ ಹಣೆಪಟ್ಟಿ ಕಟ್ಟಲಾಗಿದೆ. ನನ್ನನ್ನು ಮೋಸಗಾರ ಎಂದು ಕರೆಯಲಾಯಿತು, ಆದರೆ ನಾನು ಜೀವನದಲ್ಲಿ ಎಂದಿಗೂ ಮೋಸ ಮಾಡಲಿಲ್ಲ. ನಾನು ಅತ್ಯಂತ ನಿಷ್ಠಾವಂತ ವ್ಯಕ್ತಿ. ನನ್ನಂತಹ ನಿಷ್ಠಾವಂತ ವ್ಯಕ್ತಿಯನ್ನು ನೀವು ಎಲ್ಲಿಯೂ ಕಾಣುವುದಿಲ್ಲ. ನಾನು ನನ್ನೊಂದಿಗಿರುವ ಜನರ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇನೆ. ನನಗೆ ಇಬ್ಬರು ಸಹೋದರಿಯರಿದ್ದಾರೆ, ಆದ್ದರಿಂದ ಮಹಿಳೆಯರನ್ನು ಹೇಗೆ ಗೌರವಿಸಬೇಕೆಂದು ನನಗೆ ತಿಳಿದಿದೆ. ನನಗೆ ಅತ್ಯಂತ ನೋವುಂಟುಮಾಡುವ ವಿಷಯವೆಂದರೆ ಜನರು ನನ್ನ ಇಡೀ ಕಥೆಯನ್ನು ತಿಳಿಯದೆಯೇ ಅವರಿಗೆ ಅನಿಸಿದ್ದನ್ನ ಬರೆಯುತ್ತಾರೆ ಎಂದು ಹೇಳಿದ್ದಾರೆ.
ತಮ್ಮ ವಿಚ್ಛೇದನಕ್ಕೆ ಕಾರಣವನ್ನು ನೀಡಿದ ಚಾಹಲ್, ಒಟ್ಟಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗದ ಕಾರಣ ಅಂತರ ಹೆಚ್ಚಾಯಿತು ಎಂದು ಹೇಳಿದರು. ಎರಡೂ ಕಡೆಯಿಂದ ರಾಜಿ ಅಗತ್ಯವಾಗಿದ್ದರೂ, ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿಂದಾಗಿ ಎಲ್ಲವೂ ಹಾಳಾಗುತ್ತದೆ ಎಂದು ಹೇಳಿದರು. ತಾವು ಮತ್ತು ಧನಶ್ರೀ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದೇವೆ. ಇದರಿಂದಾಗಿ, ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಅದು ಕ್ರಮೇಣ ಸಂಬಂಧದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಹೇಳಿದರು.