ಮದುವೆಯ ವರ್ಷದಲ್ಲೇ ನವವಿವಾಹಿತೆಯ ಅನುಮಾನಾಸ್ಪದ ಸಾ*.!

ಮದುವೆಯ ವರ್ಷದಲ್ಲೇ ನವವಿವಾಹಿತೆಯ ಅನುಮಾನಾಸ್ಪದ ಸಾ*.

ಹಚ್ಚೆ ವಿಚಾರದಿಂದ ದಾಂಪತ್ಯ ಕಲಹ? ವರದಕ್ಷಿಣೆ ಕಿರುಕುಳ ಆರೋಪ.

ಚಿಕ್ಕಬಳ್ಳಾಪುರ : ಮದುವೆಯಾದ ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ನವವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ನಡೆದಿದೆ. ಮೇ 15ಕ್ಕೆ ಮದುವೆಯ ಸಂಭ್ರಮ ಆಚರಿಸಬೇಕಿದ್ದ ಮನೆ ಈಗ ಸ್ಮಶಾನ ಸದೃಶವಾಗಿದೆ.

ಪ್ರಕರಣದ ಹಿನ್ನೆಲೆ

ಗೌರಿಬಿದನೂರು ಮೂಲದ ಶಕುಂತಲಾ ಎಂಬುವರ ಪುತ್ರಿ ಪ್ರೇಮಾ ಹಾಗೂ ಶಿಡ್ಲಘಟ್ಟದ ಜಂಗಮಕೋಟೆಯ ಶಿವಕುಮಾರ್ ಪರಸ್ಪರ ಸಂಬಂಧಿಕರು. ಪ್ರೇಮಾಳನ್ನು ಶಿವಕುಮಾರ್ ಕಾಡಿ ಬೇಡಿ ಮದುವೆಯಾಗಿದ್ದ. ಮದುವೆಯಾದ ಮೊದಲ ಮೂರು ತಿಂಗಳು ದಂಪತಿ ಸುಖವಾಗಿದ್ದರು. ಆದರೆ, ಆ ನಂತರ ಪ್ರೇಮಾ ಎದೆಯ ಮೇಲೆ ಯುವಕನೊಬ್ಬನ ಹೆಸರಿನ ಹಚ್ಚೆ (Tattoo) ಇರುವುದನ್ನು ಕಂಡು ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅದು ಕೇವಲ ಸ್ನೇಹಿತನ ಹೆಸರು ಎಂದು ಪ್ರೇಮಾ ಹೇಳಿದ್ದರೂ, ಶಿವಕುಮಾರ್ ಅದನ್ನು ಅನುಮಾನಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳದ ಆರೋಪ

ಕೇವಲ ಹಚ್ಚೆ ವಿವಾದ ಮಾತ್ರವಲ್ಲದೆ, ವರದಕ್ಷಿಣೆ ತರುವಂತೆ ಶಿವಕುಮಾರ್ ಪ್ರೇಮಾ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಎಂದು ಪ್ರೇಮಾ ತಾಯಿ ಶಕುಂತಲಾ ಆರೋಪಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ಜಗಳವಾಡಿ ತವರು ಮನೆ ಸೇರಿದ್ದ ಪ್ರೇಮಾಳನ್ನು, ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಶಿವಕುಮಾರ್ ಮತ್ತೆ ಮನೆಗೆ ಕರೆತಂದಿದ್ದ. ಆದರೆ ಮನೆಗೆ ಬಂದ ತಿಂಗಳೊಳಗೆ ಪ್ರೇಮಾ ಮೃತಪಟ್ಟಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ.

ಮೂರು ತಿಂಗಳ ಹಿಂದೆ ಪ್ರೇಮಾಗೆ ಗರ್ಭಪಾತವಾಗಿತ್ತು. ಆಗಲೂ ಗಂಡನ ಮನೆಯವರು ಸರಿಯಾಗಿ ನೋಡಿಕೊಂಡಿರಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪತಿ ಶಿವಕುಮಾರ್‌ನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *