ಬೆಂಗಳೂರು : ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಂಸದೆ ಕಂಗನಾ ರಣಾವತ್ ಅವರ ಕಪಾಳಕ್ಕೆ ಹೊಡೆದಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಐಎಸ್ಎಫ್ ಮೂಲಗಳು ತಿಳಿಸಿವೆ.
ಮಹಿಳಾ ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಅವರ ವಿಚಾರಣೆ ನಡೆಯುತ್ತಿದ್ದು, ಅಂತಿಮ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಐಎಸ್ಎಫ್ ಮೂಲಗಳು ಹೇಳಿವೆ.
ಕರ್ನಾಟಕದಲ್ಲಿರುವ ಸಿಐಎಸ್ಎಫ್ನ 10ನೇ ಬೆಟಾಲಿಯನ್ಗೆ ಕುಲ್ವಿಂದರ್ ಕೌರ್ ಅವರನ್ನು ನ್ಯಾಯಯುತ ತನಿಖೆ ಹಿನ್ನೆಲೆಯಲ್ಲಿ ಚಂಡೀಗಢದಿಂದ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದ್ದು, ಆದರೆ, ಕೌರ್ ಅವರಿಗೆ 10ನೇ ಬೆಟಾಲಿಯನ್ನಲ್ಲಿ ಯಾವ ಹೊಣೆಗಾರಿಕೆ ಕೊಟ್ಟಿದ್ದಾರೆ ಎಂಬುದುರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. 10ನೇ ಬೆಟಾಲಿಯನ್, ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭದ್ರತೆ ಒದಗಿಸುತ್ತದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿ ಆಯ್ಕೆಯಾದ ಕಂಗನಾ ಅವರು ಚಂಡೀಗಢದಿಂದ ಹೊಸದಿಲ್ಲಿಗೆ ಎನ್.ಡಿ.ಎ ಮೈತ್ರಿಕೂಟದ ಸಭೆಗೆ ತೆರಳುತ್ತಿದ್ದರು. ಆಗ ಅವರ ಮೇಲೆ ಕುಲ್ವಿಂದರ್ ಕೌರ್ ಹಲ್ಲೆ ಮಾಡಿದ್ದರು. ರೈತರ ಪ್ರತಿಭಟನೆ ಬಗ್ಗೆ ಕಂಗನಾ ಕೀಳಾಗಿ ಮಾತನಾಡಿದ್ದಕ್ಕೆ ಹೊಡೆದಿದ್ದೆ ಎಂದು ಕೌರ್ ಆನಂತರ ಹೇಳಿದ್ದರು.