ಮಾವಿನ ಹಣ್ಣಿನ ಮಿಲ್ಕ್ ಶೇಕ್ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಟ್ಟು ಕುಡಿಯುತ್ತಾರೆ. ಇದು ಬೇಸಿಗೆಯ ಧಗೆಯನ್ನು ಕಡಿಮೆ ಮಾಡಿ ತಾಜಾತನ ನೀಡುತ್ತದೆ. ಇದು ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಇದರಿಂದ ಅನುಕೂಲ ಮಾತ್ರವಲ್ಲ ಅನಾನುಕೂಲಗಳು ಇದೆ. ಹಾಗಾಗಿ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಸೇವನೆ ಮಾಡುವಾಗ ಕೆಲವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾದರೆ ಯಾರು ಇವುಗಳನ್ನು ಸೇವನೆ ಮಾಡಬಾರದು? ಡಾ. ಪ್ರಿಯಾ ಈ ಬಗ್ಗೆ ಏನೆನ್ನುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹಣ್ಣುಗಳ ರಾಜ ಮಾವಿನಹಣ್ಣುನ್ನು ಸವಿಯಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಹಣ್ಣು ದೊಡ್ಡದಿರಲಿ ಚಿಕ್ಕದಿರಲಿ ಮಾರುಕಟ್ಟೆಯಲ್ಲಿ ಕಂಡಾಗ ಖರೀದಿ ಮಾಡದೆಯೇ ಮನೆಗೆ ಬರಲು ಮನಸ್ಸು ಒಪ್ಪುವುದಿಲ್ಲ. ಈಗ ಬೇಸಿಗೆಯಾದ್ದರಿಂದ ಈ ಹಣ್ಣು ಎಲ್ಲೆಡೆ ಸಿಗುತ್ತದೆ. ಇನ್ನು, ನಿಮಗೆ ತಿಳಿದಂತೆ ಈ ಹಣ್ಣಿನಿಂದ ಸಾಕಷ್ಟು ಬಗೆಯ, ರುಚಿಕರವಾದ ಖಾದ್ಯಗಳನ್ನು ಮತ್ತು ಪಾನೀಯಗಳನ್ನು ತಯಾರಿಸಲಾಗುತ್ತದೆ. ಇವುಗಳಲ್ಲಿ ಮಾವಿನ ಶೇಕ್ ಅಥವಾ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಅತ್ಯಂತ ಪ್ರಸಿದ್ಧ. ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ. ಮಾಗಿದ ಮಾವಿನಹಣ್ಣಿನ ಜೊತೆಗೆ ಹಾಲನ್ನು ಬೆರೆಸಿ ಮಾಡಿದಂತಹ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಬೇಸಿಗೆಯಲ್ಲಿ ದೇಹಕ್ಕೆ ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಈ ಹಣ್ಣು ಎಲ್ಲರಿಗೂ ಒಳ್ಳೆಯದಲ್ಲ. ಇದರಿಂದ ದೇಹಕ್ಕೆ ಲಾಭಗಳಿದ್ದರೂ ಕೂಡ ಇದರ ಸೇವನೆ ಮಾಡುವಾಗ ಕೆಲವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾದರೆ ಯಾರು ಇವುಗಳನ್ನು ಸೇವನೆ ಮಾಡಬಾರದು?
ಮಾವಿನ ಹಣ್ಣಿನ ಮಿಲ್ಕ್ ಶೇಕ್ ಕುಡಿಯುವುದರಿಂದ ಸಿಗುವ ಪ್ರಯೋಜನಗಳು:
ಆಹಾರ ತಜ್ಞೆಯಾಗಿರುವ ಪ್ರಿಯಾ ಅವರು ನೀಡಿರುವ ಮಾಹಿತಿ ಪ್ರಕಾರ, “ಬೇಸಿಗೆಯಲ್ಲಿ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಕುಡಿಯುವುದು ತುಂಬಾ ರುಚಿಕರ ಜೊತೆಗೆ ಇದು ದೇಹಕ್ಕೂ ತಂಪು. ಆದರೆ ಇದನ್ನು ಕುಡಿಯುವುದರಿಂದ ಅನುಕೂಲ ಮತ್ತು ಅನಾನುಕೂಲ ಎರಡೂ ಇವೆ. ಮಾವಿನಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಫೈಬರ್ ಸಮೃದ್ಧವಾಗಿದೆ. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ಇದು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತದೆ. ಅದರಲ್ಲಿಯೂ ಬೇಸಿಗೆ ಸಮಯದಲ್ಲಿ ದೇಹವನ್ನು ಶಾಖದಿಂದ ರಕ್ಷಿಸುತ್ತದೆ” ಎಂದು ಅವರು ಹೇಳಿದ್ದಾರೆ.