ಭವಿಷ್ಯದಲ್ಲಿ ಕ್ರಾಂತಿಕಾರಿಯಾಗುವ ನಿರೀಕ್ಷೆ: ಸಚಿವ ಶರಣ ಪ್ರಕಾಶ್ ಪಾಟೀಲ್

ಭವಿಷ್ಯದಲ್ಲಿ ಕ್ರಾಂತಿಕಾರಿಯಾಗುವ ನಿರೀಕ್ಷೆ: ಸಚಿವ ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು: ಆರೈಕೆ ಮತ್ತು ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯು (ಆರ್ಎಎಸ್) ಭವಿಷ್ಯದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿ ಮಾಡುವ ನಿರೀಕ್ಷೆ ಇದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಗುರುವಾರ ತಿಳಿಸಿದರು.

ಎಂಬೆಸ್ಸಿ ಗಾಲ್ಫ್ ಲಿಂಕ್ಸ್ನಲ್ಲಿ ಇಂಟ್ಯೂಟಿವ್ಸ್ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ನ (ಜಾಗತಿಕ ಸಾಮರ್ಥ್ಯ ಕೇಂದ್ರ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಜಾಗತಿಕ ಮಟ್ಟದಲ್ಲಿ ಈಗ ವೈದ್ಯಕೀಯ ಕೇಂದ್ರಗಳಲ್ಲಿ ಸೂಕ್ತ ಆರೈಕೆ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇಂಟ್ಯೂಟಿವ್, ಈ ಕ್ಷೇತ್ರದಲ್ಲಿ ಜಾಗತಿಕ ತಂತ್ರಜ್ಞಾನ ಹೊಂದಿದ್ದು ಮತ್ತು ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದೆ. ಆರೋಗ್ಯ ಆವಿಷ್ಕಾರದ ಪ್ರಗತಿಗೆ ಇನ್ನಷ್ಟು ಉತ್ತೇಜನ ನೀಡಲು ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇದರಿಂದ ಸಾಕಷ್ಟು ಪ್ರಯೋಜನಗಳಾಗಲಿವೆ ಎಂದು ಸಚಿವರು ತಿಳಿಸಿದರು.

“ನಾವು ಇಂಟ್ಯೂಟಿವ್ನ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು ಉದ್ಘಾಟಿಸುತ್ತಿರುವುದು ಮಹತ್ವದ ಮೈಲಿಗಲ್ಲಾಗಿದೆ. ರೊಬೊಟಿಕ್ಸ್ನಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಶಸ್ತ್ರಚಿಕಿತ್ಸೆಯ ವಿಧಾನದಲ್ಲಿ ಪರಿಣಾಮಕಾರಿಯಾಗಲಿದೆ ಮತ್ತು ಉತ್ತಮ ಭವಿಷ್ಯವನ್ನು ರೂಪಿಸುತ್ತದೆ. ಈ ಕೇಂದ್ರವು ಹೆಚ್ಚಿನ ವೈದ್ಯರಿಗೆ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ-ಈ ಕ್ಷೇತ್ರದಲ್ಲಿ ಭಾರತವು ಈಗಾಗಲೇ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಇಂತಹ ಆವಿಷ್ಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸಚಿವ ಡಾ. ಪಾಟೀಲ್ ಹೇಳಿದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಂತಹ ಸಹಯೋಗದ ಪ್ರಯತ್ನಗಳ ಮೂಲಕ ಗ್ರಾಮೀಣ ಮತ್ತು ದೂರದ ಪ್ರದೇಶಗಳು ಹಾಗೂ ಕರ್ನಾಟಕದಾದ್ಯಂತ ಇದನ್ನು ವಿಸ್ತರಿಸುವ ಬಗ್ಗೆ ಸಚಿವರು ಆಶಾವಾದ ವ್ಯಕ್ತಪಡಿಸಿದರು.

“ಆಧುನಿಕ ಆರೋಗ್ಯ ಸೇವೆಯು ಕರ್ನಾಟಕದ ಮೂಲೆ ಮೂಲೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಇಂಟ್ಯೂಟಿವ್ನಂತಹ ವೈದ್ಯಕೀಯ ತಂತ್ರಜ್ಞಾನದ ಸಂಸ್ಥೆಗಳೊಂದಿಗೆ ಕೈ ಜೋಡಿಸಲು ಸರ್ಕಾರ ಮುಂದಾಗಿದೆ” ಎಂದು ಸಚಿವರು ಹೇಳಿದರು.

ಇಂಟ್ಯೂಟಿವ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗ್ಯಾರಿ ಎಸ್. ಗುಥಾರ್ಟ್ ಮಾತನಾಡಿ, ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಈ ಕೇಂದ್ರವನ್ನು ಆರಂಭಿಸಲಾಗಿದೆ. ನಮ್ಮ ಅಸ್ತಿತ್ವವನ್ನು ಬಲಪಡಿಸುವ ಬದ್ಧತೆಯನ್ನೂ ಹೊಂದಿದ್ದೇವೆ. ಈ ಜಾಗತಿಕ ಸಾಮರ್ಥ್ಯ ಕೇಂದ್ರವು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅದರ ಯಶಸ್ವಿ ಅನುಷ್ಠಾನ ಮತ್ತು ಅಳವಡಿಕೆಗೆ ಅಗತ್ಯವಾದ ಸೇವೆಗಳು, ಬೆಂಬಲ ಮತ್ತು ಸಂಪೂರ್ಣ ವ್ಯವಸ್ಥೆಯನ್ನು ಒದಗಿಸುವಲ್ಲಿ ಸಹಕಾರಿಯಾಗಲಿದೆ” ಎಂದರು.

ಕಾರ್ಯಕ್ರಮದಲ್ಲಿ ಇಂಟ್ಯೂಟಿವ್ ಇಂಡಿಯಾದ ಜನರಲ್ ಮ್ಯಾನೇಜರ್ ಡಾರ್ಲಾ ಹಟ್ಟನ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *