ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಮತಿಘಟ್ಟ ಗ್ರಾಮದಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿ ಇತ್ತೀಚಿಗೆ ನಿರ್ಮಿಸಿರುವ ತಡೆಗೋಡೆ ಕುಸಿಯುವ ಸ್ಥಿತಿಯಲ್ಲಿದೆ. ಅಪಾಯ ಕೈ ಬೀಸಿ ಕರೆಯುತ್ತಿದ್ದರೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮತಿಘಟ್ಟ ಗ್ರಾಮದ ಮೂಲಕ ಹಾದುಹೋಗುವ ಮೈಸೂರು-ಹಡಗಲಿ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಮತಿಘಟ್ಟ ಭಾಗದ ಕೆರೆ ಏರಿಯ ಬಳಿ ಇತ್ತೀಚಿಗೆ ಡಾಂಬರು ರಸ್ತೆ ನಿರ್ಮಿಸಿ ಇಕ್ಕೆಲಗಳಲ್ಲಿ ಕಬ್ಬಿಣದ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.
ಆದರೆ ಸದರಿ ತಡೆಗೋಡೆಯು ಟಾರ್ ರಸ್ತೆಯನ್ನು ಸೇರಿದಂತೆ ಕೆಲವಡೆ ಕುಸಿದಿದೆ. ಈ ಹೆದ್ದಾರಿಯಲ್ಲಿ ವಿಪರೀತ ವಾಹನ ಸಂಚಾರದ ಒತ್ತಡವಿದೆ. ಯಾವುದೇ ಸಂದರ್ಭದಲ್ಲಿ ಕುಸಿದ ರಸ್ತೆಯ ಭಾಗದಲ್ಲಿ ದೊಡ್ಡಮಟ್ಟದ ವಾಹನಗಳು ಸಂಚರಿಸಿದರೆ ತಡೆಗೋಡೆ ಸೇರಿದಂತೆ ವಾಹನವೂ ರಸ್ತೆ ಪಕ್ಕದ ತಗ್ಗಿನ ಪ್ರದೇಶಕ್ಕೆ ಬೀಳುವ ಅಪಾಯವಿದೆ ಎಂದು ಮತಿಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ್ ದೂರಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ ಎಂದು ಮತಿಘಟ್ಟ ಗ್ರಾಮದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ರಸ್ತೆಯಿಂದಾಗಿ ಚರಂಡಿ ನೀರು ಸರಿಯಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡದೆ ಕೈ ಬಿಟ್ಟಿದ್ದಾರೆ ಎಂದರು.