ಕರ್ನಾಟಕ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಪ್ರತಿ ತಿಂಗಳು ಮನೆ ಯಜಮಾನಿಗೆ 2,000 ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಇನ್ನು ಬಾಕಿ ಉಳಿಸಿಕೊಂಡಿದ್ದ 16ನೇ ಕಂತಿನ ಹಣ ಯಾವಾಗ ಜಮೆಯಾಗಲಿದೆ ಎನ್ನುವ ಪ್ರಶ್ನೆಗಳು ಎದ್ದಿದ್ದವು. ಈ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಗುಡ್ ನ್ಯೂಸ್ವೊಂದನ್ನು ನೀಡಿದೆ.
ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಾಕಲಾಗುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಹಲವು ಕಂತುಗಳ ಹಣ ಇನ್ನೂ ಜಮೆಯಾಗಿಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದರು. ಬಳಿಕ ಎಚ್ಚೆತ್ತ ಸರ್ಕಾರ ಆ ಎಲ್ಲಾ ಕಂತುಗಳ ಹಣ ಜಮೆ ಮಾಡುವ ಕೆಲಸವನ್ನು ಮಾಡಿತ್ತು.
ಇದೀಗ 16ನೇ ಕಂತಿನ ಹಣ ಬಾಕಿ ಉಳಿದಿದ್ದು, ಈ ಹಣ ಜನವರಿ 14ರಿಂದ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ತಿಳಿಸಿದ್ದಾರೆ. ಈ ಮೂಲಕ ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಗೃಹಲಕ್ಷ್ಮಿಯ ಯೋಜನೆಯ ಡಿಸೆಂಬರ್ ತಿಂಗಳ ಕಂತಿನ ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಣವನ್ನು ಆರ್ಥಿಕ ಇಲಾಖೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಜನವರಿ 14ದಂದು ಹಣ ಜಮಾ ಮಾಡಲು ಆರಂಭ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಳಾರ್ ರವರು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವ ಫಲಾನುಭವಿಗಳು ಮೊದಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು. ಜೊತೆಗೆ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಶಿವಮೊಗ್ಗ, ಜಿಲ್ಲೆಯಲ್ಲಿ ಶೇಕಡ 90ರಷ್ಟು ಮಹಿಳೆಯರು ಲಾಭ ಪಡೆದುಕೊಂಡಿದ್ದಾರೆ. ಈ ಯೋಜನೆಯಿಂದ ಪ್ರತಿ ಮಹಿಳಾ ಫಲಾನುಭವಿಗಳು ಈವರೆಗೆ 15 ಕಂತಿನಲ್ಲಿ 30,000 ರೂಪಾಯಿ ಹಣ ಪಡೆದುಕೊಂಡಿದ್ದಾರೆ. ತುಂಬಾ ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟುಕೊಂಡು ವೃತ್ತಿಯನ್ನು ಆರಂಭಿಸಿದ್ದಾರೆ. ಅಲ್ಲದೆ, ಉಪಯುಕ್ತ ವಸ್ತುಗಳನ್ನು ಖರೀದಿ ಮಾಡಿರುವ ಉದಾಹರಣೆಗಳಿವೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ದಾರಿ ದೀಪವಾಗಿದೆ ಹಾಗೂ ಮಹಿಳೆಯರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಯ ಬದಲಾವಣೆಗಳನ್ನು ತರುವಲ್ಲಿ ಗೃಹಲಕ್ಷ್ಮಿ ಯೋಜನೆ ಯಶಸ್ವಿ ಕಂಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ತಿಳಿಸಿದ್ದಾರೆ.