ಕೋಟ್; ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಮಹಾಮಂಡಳಿ ಅಧ್ಯಕ್ಷೆ ಜಿ ಚಿತ್ರಾದೇವಿ ಮಾತನಾಡಿ ನಿವೃತ್ತರಾದ ಎಲ್ಲರಿಗೂ ಗ್ರಾಚ್ಯುಟಿ ನೀಡಬೇಕು..ಗೌರವಧನ( ಕನಿಷ್ಠ ವೇತನ) ಹೆಚ್ಚುಸಬೇಕು, ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆ ಆಗಬೇಕು ಮತ್ತು ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ ಯುಕೆಜಿ ಪ್ರಾರಂಭಿಸಬೇಕೆಂದು .. ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಬೆಂಗಳೂರು; ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಸಾವಿರಾರು ಕಾರ್ಯಕರ್ತರು ಮತ್ತು ಸಹಾಯಕಿಯರು ಸೇರಿ ವಿಧಾನಸೌಧ ಚಲೋ ಚಳುವಳಿ ಎಂದು ಪ್ರತಿಭಟನೆ ನಡೆಸಿದರು. ದೇಶದ ಬಡ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಎದುರಿಸುತ್ತಿರುವ ಅಪೌಷ್ಠಿಕತೆ-ರಕ್ತ ಹೀನತೆ-ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕುವ ಹಿನ್ನೆಲೆಯಲ್ಲಿ ಕಳೆದ 50 ವರ್ಷಗಳ ಹಿಂದೆ 1975 ರಲ್ಲಿ ಶ್ರೀಮತಿ ಇಂದಿರಾಗಾಂಧಿರವರ 20 ಅಂಶಗಳ ಕಾರ್ಯಕ್ರಮಗಳಲ್ಲಿ ಶಿಶು ಅಭಿವೃದ್ಧಿ ಯೋಜನೆ (ICDS) ಪರಿಣಾಮಕಾರಿಯಾಗಿದೆ. ಶಿಶು ಅಭಿವೃದ್ಧಿ ಯೋಜನೆಯ ಪ್ರಗತಿಯ ಬಗ್ಗೆ ಹಾಗೂ ಮಹತ್ವದ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಪರಿಗಣಿಸಿರುವುದು ಅಭಿನಂದನೀಯ.
ಶಿಶು ಅಭಿವೃದ್ಧಿ ಯೋಜನೆ ದೇಶಾದ್ಯಂತ ಅಸ್ತಿತ್ವದಲ್ಲಿದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ 1975 ರಲ್ಲಿ ಟಿ. ನರಸೀಪುರ ತಾಲ್ಲೂಕಿನಲ್ಲಿ ಪ್ರಾರಂಭವಾದ ಯೋಜನೆ ಇಂದು ರಾಜ್ಯದ ಎಲ್ಲಾ ಕಡೆ ವಿಸ್ತರಿಸಲಾಗಿದೆ. ಈ ಯೋಜನೆಯ ಎಲ್ಲಾ ಸವಲತ್ತುಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸಿರುವುದರಿಂದ ಇಂದು ರಾಜ್ಯದಲ್ಲಿ ಶಿಶು ಅಭಿವೃದ್ಧಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿಸ್ವಾರ್ಥ ಸೇವೆಯಿಂದ ಕನಿಷ್ಠ ವೇತನವನ್ನು ಪಡೆಯದೆ ಸರ್ಕಾರದಿಂದ ಸಿಗುವ ಗೌರವ ಧನದಿಂದ ಜೀವನ ನಡೆಸುತ್ತಿರುವುದು ಸರ್ಕಾರಕ್ಕೂ ತಿಳಿದ ವಿಷಯ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳು ತಮ್ಮ ನ್ಯಾಯಯುತವಾದ ಬೇಡಿಕೆಗಳ ಬಗ್ಗೆ ಹಲವಾರು ಬಾರಿ ಹೋರಾಟಗಳನ್ನು ನಡೆಸುತ್ತಾ ಬಂದಿರುವುದು ಸರ್ಕಾರದ ಗಮನಕ್ಕಿದ್ದರು ಸಹ, ಆ ಬೇಡಿಕೆಗಳನ್ನು ಪರಿಗಣಿಸುವ ಹಿನ್ನೆಲೆಯಲ್ಲಿ ಸೂಕ್ತ ತೀರ್ಮಾನಗಳನ್ನು ಸಕಾಲದಲ್ಲಿ ತೆಗೆದುಕೊಳ್ಳದೆ ಇರುವುದರಿಂದ ಕೆಲವು ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಅಂಗನವಾಡಿ ಕೆಲಸಗಳ ಹೊರತಾಗಿ ಇತರ ಅನೇಕ ಬೇರೆ ಬೇರೆ ಇಲಾಖೆಗಳ ಜವಾಬ್ದಾರಿಗಳನ್ನು ವಹಿಸಿದ್ದು ಅವುಗಳನ್ನು ಸಹ ನಿರ್ವಹಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದರೂ ಸಹ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಬೇಕಿರುವ ಸವಲತ್ತುಗಳನ್ನು ವಿಸ್ತರಿಸದಿರುವುದು ವಿಷಾಧಕರ ಸಂಗತಿ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮದ್ಯೆ ಕೆಲಸ ಮಾಡುತ್ತಿರುವ ಸಂಘಟನೆಗಳು ಪ್ರತ್ಯೇಕವಾಗಿ ಹೋರಾಟಗಳನ್ನು ನಡೆಸಲಾಗುತ್ತಿತ್ತು. ಆದರೆ ಇದನ್ನು ಮನಗಂಡ ಸಂಘಟನೆಗಳ ಪದಾಧಿಕಾರಿಗಳು ಒಟ್ಟಾಗಿ ಸೇರಿ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿಯ ಹೆಸರಿನಲ್ಲಿ ದಿನಾಂಕ 19.09.2024 ರ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸಲು ಮುಂದಾಗಿದ್ದು, ಕರ್ನಾಟಕ ರಾಜ್ಯ ಅಂಗವಾಡಿ
ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಈಗಾಗಲೇ ಸರ್ಕಾರಕ್ಕೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿ ದಿನಾಂಕ 19.09.2024 ರಂದು ಮುಷ್ಕರ ಮಾಡುವುದಾಗಿ ತಿಳಿಸಲಾಗಿತ್ತು. ಅದರಂತೆ ಈ ಬೇಡಿಕೆಗಳ ಬಗ್ಗೆ ಮತ್ತೊಮ್ಮೆ ತಮ್ಮ ಗಮನ ಸೆಳೆಯಲು ಇಂದು ಹೋರಾಟದ ಮೂಲಕ ಈ ಕೆಳಕಂಡ ಬೇಡಿಕೆಗಳನೊಳಗೊಂಡ ಮನವಿ ಪತ್ರವನ್ನು ಸಲ್ಲಿಸುತ್ತಿದ್ದು ‘ಇವುಗಳ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಂಡು ಪರಿಹರಿಸಬೇಕೆಂದು ಆಗ್ರಹ ಪಡಿಸಿದರು.
ಗ್ರಾಚ್ಯುಟಿ ಸೌಲಭ್ಯ :-ದೇಶದ ಸರ್ವೋಚ್ಚ ನ್ಯಾಯಲಯವು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ನಿವೃತ್ತಿ ಉಪಧನ (ಗ್ರಾಚ್ಯುಟಿ ಸೌಲಭ್ಯ) ನೀಡುವ ಕುರಿತು ಆದೇಶ ಮಾಡಿರುತ್ತದೆ. ಸದರಿ ಆದೇಶದ ಪ್ರಕಾರ 1975 ರಿಂದ ಸೇವೆ ಸಲ್ಲಿಸಿ ಕಾಲಕಾಲಕ್ಕೆ ನಿವೃತ್ತಿಯಾದ ಅಂಗನಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕಡ್ಡಯಾವಾಗಿ ಗ್ರಾಚ್ಯುಟಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ 01.04.2023 ರಿಂದ ನಿವೃತ್ತಿಯಾದವರಿಗೆ ಅನ್ವಯವಾಗುವಂತೆ ಗ್ರಾಚ್ಯುಟಿ (ಉಪಧನ) ನೀಡುವ ಕುರಿತು ಆದೇಶಿರುವುದು ಸಮಂಜಸವಲ್ಲ. ಆದ್ದರಿಂದ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ 1975 ರಿಂದ ಕೆಲಸ ನಿರ್ವಹಿಸಿ ಕಾಲಕಾಲಕ್ಕೆ ನಿವೃತ್ತಿಯಾದ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕಡ್ಡಾಯವಾಗಿ ಗ್ರಾಚ್ಯುಟಿ ನೀಡುವ ತಿದ್ದುಪಡಿ ಆದೇಶವನ್ನು ಮಾಡಲು ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ.
ಗೌರವಧನ ಹೆಚ್ಚಿಸಿ (ಕನಿಷ್ಠ ವೇತನ) ಇಡುಗಂಟು ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಈಗ ನೀಡಲಾಗುತ್ತಿರುವ ಗೌರವ ಸಂಭಾವನೆಯಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಗೊಳಿಸುವುದು ಹಾಗೂ ನಿಗದಿಗೊಳಿಸುವವರೆವಿಗೂ ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ನೀಡಲಾಗಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರೂ.15000/- ಹಾಗೂ ಸಹಾಯಕಿಯರಿಗೆ ರೂ.10000/- ಗೌರವ ಧನ ಹೆಚ್ಚಿಸುವ ಭರವಸೆಯಂತೆ (ಗೌರವಧನ ಹೆಚ್ಚಿಸುವ ಆರನೇ ಗ್ಯಾರಂಟಿ ಯಂತೆ) ಗೌರವಧನ ಹೆಚ್ಚಿಸಲು ಒತ್ತಾಯಿಸುತ್ತೇವೆ. ಹಾಗೂ ನಿವೃತ್ತರಾದವರಿಗೆ ರೂ. 3 ಲಕ್ಷ ಇಡುಗಂಟು ನೀಡುವ ಯೋಜನೆಯನ್ನು ಜಾರಿಗೊಳಿಸಬೇಕೆಂದು ಅಂಗನವಾಡಿ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಪಡಿಸುತ್ತದೆ.
ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಅಂಗನವಾಡಿ ಕೇಂದ್ರಗಳಲ್ಲಿಯೇ LKG – UKG ಪ್ರಾರಂಭಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿರುವುದನ್ನು ಹಾಗೂ ಅದನ್ನು ಕಾರ್ಯಗತಗೊಳಿಸಲು ಶಿಕ್ಷಣ ತಜ್ಞರು, ವಿಷಯ ಪರಿಣಿತರು, ಅಂಗನವಾಡಿ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲು ಸೂಚಿಸಿರುವುದನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಒಕ್ಕೂರಲಿನಿಂದ ಸ್ವಾಗತಿಸುತ್ತದೆ. ಹಾಗೂ ಕೂಡಲೇ ತಜ್ಞರ ಸಮಿತಿ ರಚಿಸಲು ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಆಗ್ರಹಿಸುತ್ತೇವೆ.
ಗುಣ ಮಟ್ಟದ ಪೌಷ್ಠಿಕ ಆಹಾರ ನೀಡುವ ಬಗ್ಗೆ ಕರ್ನಾಟಕ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿರುವ ಪೌಷ್ಠಿಕ ಆಹಾರವು ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದೆ ಎಂಬುದಾಗಿ ವ್ಯಾಪಕವಾಗಿ ದೂರುಗಳು ಬರುತ್ತಿದ್ದು, ಆಹಾರದಲ್ಲಿ ಗುಣಮಟ್ಟ ಸರಿ ಇಲ್ಲದಿರುವುದರಿಂದ ಫಲಾನುಭವಿಗಳು ಸಹ ಸದರಿ ಪೌಷ್ಠಿಕ ಆಹಾರವನ್ನು ಸೇವಿಸುತ್ತಿಲ್ಲ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಯಮಾವಳಿಗಳ ಅನುಸಾರ ಸ್ಥಳೀಯವಾಗಿ ದೊರಕುವ ಪೌಷ್ಠಿಕ ಆಹಾರ ನೀಡುವ ನಿಯಮ ಇದ್ದರೂ ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಆಹಾರ ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದಾರೆಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ವ್ಯವಸ್ಥೆ ಯನ್ನು ಬದಲಾಯಿಸಿ ಪಾರದರ್ಶಕವಾಗಿ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರ ಸರಬರಾಜು ಮಾಡಲು ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಸಮಿತಿ ರಚಿಸುವ ಮೂಲಕ ಆಹಾರದ ಗುಣಮಟ್ಟವನ್ನು ಕಾಪಾಡಬೇಕೆಂದು ಆಗ್ರಹಿಸುತ್ತೇವೆ.
ಕಳೆದ ಐದು ದಶಕಗಳಿಂದ ರಾಜ್ಯದಲ್ಲಿ ಅಂಗನವಾಡಿ ಸಂಘಟನೆಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೌಹಾರ್ದತೆ ಮತ್ತು ಸಮನ್ವಯತೆಯಿಂದ ಅಭಿವೃದ್ಧಿ ಕಾರ್ಯನಿರ್ವಹಿಸಿಕೊಂಡು ಬರಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಸಭೆ ಸಮಾಲೋಚನೆ ನಡೆಸುವ ಪ್ರತೀತಿಯನ್ನು ಕೈ ಬಿಟ್ಟಿದ್ದು ಇದನ್ನು ಸರಿಪಡಿಸಿ ಆಗಿಂದಾಗ್ಗೆ ಉದ್ಭವಿಸುವ ಸಮಸ್ಯೆಗಳ ಪರಿಹಾರಕ್ಕೆ ಸಮಾಲೋಚನ ಸಭೆಗಳನ್ನು ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸುತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷ ಬಿ.ಅಮ್ಮದ್, ಪ್ರಧಾನ ಕಾರ್ಯದರ್ಶಿ ಎಂ ಜಯಮ್ಮ ಸೇರಿದಂತೆ ರಾಜ್ಯದ ಜಿಲ್ಲೆಗಳಿಂದ ಸಾವಿರಾರು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಭಾಗಿಯಾಗಿದ್ದರು.