IPL 2025 ನಡುವೆ ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಎರಡೆರಡು ಐಸಿಸಿ (ICC) ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ದೀರ್ಘ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.

ವಾಸ್ತವವಾಗಿ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರನ್ನು ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲು ನಿರ್ಧರಿಸಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಈ ಮಾದರಿಗೆ ವಿದಾಯ ಹೇಳಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದು ಅದರಲ್ಲಿ ಅವರು ತಮ್ಮ ಟೆಸ್ಟ್ ಕ್ಯಾಪ್ ಸಂಖ್ಯೆ 280 ರ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ತಮ್ಮ ನಿವೃತ್ತಿಯನ್ನು ಘೋಷಿಸಿದ್ದು, ‘ನಾನು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ಹೇಳಲು ಬಯಸುತ್ತೇನೆ. ನನ್ನ ದೇಶವನ್ನು ಬಿಳಿ ಬಟ್ಟೆ ಧರಿಸಿ ಪ್ರತಿನಿಧಿಸುವುದು ನನಗೆ ದೊಡ್ಡ ಗೌರವವಾಗಿದೆ. ಇಷ್ಟು ವರ್ಷಗಳ ಕಾಲ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಏಕದಿನ ಮಾದರಿಯಲ್ಲಿ ದೇಶವನ್ನು ಪ್ರತಿನಿಧಿಸುವುದನ್ನು ಮುಂದುವರೆಸುತ್ತೇನೆ’ ಎಂದು ರೋಹಿತ್ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ವಾಸ್ತವವಾಗಿ ಕಳೆದ ಕೆಲವು ತಿಂಗಳುಗಳಿಂದ ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಕಳೆದ ವರ್ಷ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮುಖಭಂಗಕ್ಕೊಳಗಾಗಿತ್ತು. ಆ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಹೀನಾಯ ಪ್ರದರ್ಶನ ನೀಡಿತ್ತು. ಈ ಎರಡು ಸೋಲುಗಳು ತಂಡವನ್ನು ಡಬ್ಲ್ಯುಟಿಸಿ ಫೈನಲ್ನಿಂದ ಹೊರಹಾಕಿತ್ತು. ಅಂದಿನಿಂದ ರೋಹಿತ್ರನ್ನು ಟೆಸ್ಟ್ ತಂಡದಿಂದ ಹೊರಗಿಡುವ ಜೊತೆಗೆ ಅವರನ್ನು ನಾಯಕತ್ವದಿಂದಲೂ ಕೆಳಗಿಳಿಸಬೇಕು ಎಂಬು ಕೂಗು ಜೋರಾಗಿ ಕೇಳಿಬರುತ್ತಿತ್ತು.
ಆದರೆ ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಇಂಗ್ಲೆಂಡ್ ಪ್ರವಾಸದಲ್ಲೂ ತಂಡವನ್ನು ಮುನ್ನಡೆಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಮೇ 6 ರಂದು, ಆಯ್ಕೆ ಸಮಿತಿಯು ರೋಹಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಿದ್ದು, ಅದರ ಬಗ್ಗೆ ಬಿಸಿಸಿಐಗೂ ತಿಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಇದರ ಬೆನ್ನಲ್ಲೇ ರೋಹಿತ್ ನಿವೃತ್ತಿ ಘೋಷಿಸಿದ್ದಾರೆ.