ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸದಸ್ಯರಿಂದ ಲೈಂಗಿಕ ಕಿರುಕುಳ ಆರೋಪ ಮಾಡಿ ಕೇರಳದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆರ್ಎಸ್ಎಸ್ ವಿರುದ್ಧ ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಂಜುನಾಥ್ಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರ್ಎಸ್ಎಸ್ ಸಂಘಟನೆ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಆರ್ಎಸ್ಎಸ್ ಪ್ರತಿಕೃತಿ ಹಾಗೂ ಟೋಪಿಯನ್ನು ಸುಡಲು ಯತ್ನಿಸಿದರು.
ಈ ವೇಳೆ ಮಂಜುನಾಥಗೌಡ ಮಾತನಾಡಿ, ಕೇರಳದಲ್ಲಿ ಯುವಕರೊಬ್ಬರು ಆರ್ಎಸ್ಎಸ್ ಕಾರ್ಯಕರ್ತರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲೂ ಹಲವು ಆರ್ಎಸ್ಎಸ್ ಮಾಜಿ ಕಾರ್ಯಕರ್ತರು ಅಲ್ಲಿನ ಅನಾಚಾರ, ಶೋಷಣೆ ಬಗ್ಗೆ ತಿಳಿಸಿದ್ದಾರೆ. ಹನುಮೇಗೌಡ ಎಂಬುವವರು ಆರ್ಎಸ್ಎಸ್ನ ಒಳಸುಳಿಗಳು ಎಂಬ ಪುಸ್ತಕದಲ್ಲಿ ಆರ್ಎಸ್ಎಸ್ನಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಬರೆದಿದ್ದಾರೆ. ಹೀಗಾಗಿ ಆರ್ಎಸ್ಎಸ್ನಲ್ಲಿನ ಲೈಂಗಿಕ ದೌರ್ಜನ್ಯಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹ ಮಾಡಿದರು.
ಆರ್ಎಸ್ಎಸ್ ಕುತಂತ್ರಗಳ ಬಗ್ಗೆ ಬಿಜೆಪಿಯ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೇರಿದಂತೆ ಬಿಜೆಪಿಯವರೇ ಹಲವು ಬಾರಿ ಹೇಳಿದ್ದಾರೆ. ಮಹಾತ್ಮಗಾಂಧಿ ಅವರನ್ನು ಕೊಂದಿದ್ದು ಇದೇ ಆರ್ಎಸ್ಎಸ್ನ ಸಂತತಿ ಎಂದು ಆರೋಪ ಮಾಡಿದರು.
ಬಿಜೆಪಿಯವರು ಈಗ ಸರ್ದಾರ್ ವಲ್ಲಭಾಬಾಯಿ ಪಟೇಲ್ ಫೋಟೋಗೆ ಪೂಜೆ ಮಾಡುತ್ತಾರೆ. ಆದರೆ ಆರ್ಎಸ್ಎಸ್ ಸಮಾಜದ ಸ್ವಾಸ್ಥ್ಯ ಹಾಗೂ ದೇಶಕ್ಕೆ ಕಂಟಕ ಎಂದು ಎರಡು ಬಾರಿ ನಿಷೇಧಿಸಿದ್ದರು. ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದೇವೆ ಎನ್ನುವ ಈ ಸಂಘಟನೆಯಿಂದ ದೇಶಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ, ಸ್ವಾತಂತ್ರ್ಯ ಬಂದ 50 ವರ್ಷಗಳವರೆಗೆ ತಮ್ಮ ಕಚೇರಿ ಮೇಲೆ ರಾಷ್ಟ್ರಧ್ವಜವನ್ನೂ ಹಾರಿಸದ ದೇಶದ್ರೋಹಿಗಳು ಆರ್ಎಸ್ಎಸ್ನವರು. ದೇಶದ ಐಕ್ಯತೆ, ಅಭಿವೃದ್ಧಿಗೆ ಅವರು ಮಾರಕ ಎಂದು ಟೀಕಾಪ್ರಹಾರ ನಡೆಸಿದರು.
ಜಾತಿ, ಧರ್ಮಗಳ ನಡುವೆ ಒಡಕು ತಂದು ಸಮಾಜವನ್ನು ಹಾಳು ಮಾಡುವುದಷ್ಟೇ ಅವರ ಉದ್ದೇಶ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಿ ಟೋಪಿ ಎಂದಿದ್ದಕ್ಕೆ ಆರ್ಎಸ್ಎಸ್, ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಕಪ್ಪು ಪ್ರತಿಭಟನೆ ಸಂಕೇತ. ಕರಿ ಟೋಪಿ ಇಟ್ಟುಕೊಂಡಿರುವ ಇವರು ದೇಶಕ್ಕಾಗಿ ಒಂದು ಹೋರಾಟವನ್ನೂ ಮಾಡಿಲ್ಲ. ಇವರಿಗೆ ದೇಶದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಮಂಜುನಾಥ್ ಕಿಡಿ ಕಾರಿದರು.
ಪ್ರತಿಭಟನೆಯನ್ನು ನೂರಾರು ಕಾರ್ಯಕರ್ತರು ಭಾಗವಹಿಸಿ ಆರ್ಎಸ್ಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
For More Updates Join our WhatsApp Group :




