ಬೆಂಗಳೂರು: ಬೆಂಗಳೂರಿನಲ್ಲಿ 7 ಕೋಟಿ ರೂ. ದರೋಡೆ ಪ್ರಕರಣ ಸಂಬಂಧ ದರೋಡೆಕೋರರ ಹೆಡೆಮುರಿ ಕಟ್ಟಲು ಗೃಹ ಸಚಿವ ಡಾ. ಜಿ. ಪರಮೇಶ್ವರ ಕೊಟ್ಟಿದ್ದ 24 ಗಂಟೆಯ ಗಡುವು ಮುಗಿದಿದೆ. ಆದರೆ, ಈವರೆಗೆ ದರೋಡೆಕೋರರ ಸುಳಿವು ಮಾತ್ರ ಸಿಕ್ಕಿದೆ. ಆರೋಪಿಗಳ ಫೋಟೋ ಬಿಡುಗಡೆ ಮಾಡಲಾಗಿದೆ. ಆದರೆ, ಹಣ ದೋಚಿದವರು ಎಲ್ಲಿಗೆ ಹೋಗಿದ್ದಾರೆ? ಹಣ ಎಲ್ಲಿದೆ ಎಂಬುದು ಮಾತ್ರ ಪತ್ತೆಯಾಗಿಲ್ಲ. ಪೊಲೀಸರು ದರೋಡೆ ಕೇಸ್ ಸಂಬಂಧ ಒಬ್ಬೊಬ್ಬರಾಗಿ ಶಂಕಿತರನ್ನು ಬಂಧಿಸುತ್ತಿದ್ದಾರೆ. ಈ ಮಧ್ಯೆ, ಈ ಪ್ರಕರಣದ ದಿಕ್ಕನ್ನೇ ಬದಲಿಸುವಂಥ ರೋಚಕ ಬೆಳವಣಿಗೆ ನಡೆದಿದೆ. ಇಡೀ ದರೋಡೆಯ ಮಾಸ್ಟರ್‌ಮೈಂಡ್ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಎಂಬ ಶಂಕೆ ವ್ಯಕ್ತವಾಗಿದೆ.
ದರೋಡೆ ಪ್ರಕರಣ ಸಂಬಂಧ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್‌ಮೈಂಡ್ ಎನ್ನಲಾಗುತ್ತಿದೆ. ಇವರೇ ಹುಡುಗರನ್ನ ದರೋಡೆಗೆ ಸಿದ್ಧಪಡಿಸಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್, ದರೋಡೆ ಕುರಿತು ಪಕ್ಕಾ ತರಬೇತಿ ನೀಡಿದ್ದರು. ಹೇಗೆ ರಾಬರಿ ಮಾಡಬೇಕು? ಹೇಗೆ ತಪ್ಪಿಸಿಕೊಳ್ಳಬೇಕೆಂದು ಟ್ರೈನಿಂಗ್ ಕೂಡ ಕೊಟ್ಟಿದ್ದರು. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆಂದು ಸಹ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ತಂಡವೇ 7.11 ಕೋಟಿ ರೂ. ದರೋಡೆ ಮಾಡಿದೆ. ಅಲ್ಲದೆ ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಯ ಮಾಜಿ ಉದ್ಯೋಗಿಗಳು ದರೋಡೆಗೆ ಸಾಥ್ ಕೊಟ್ಟಿದ್ದು, ಕದ್ದ ಹಣವನ್ನು ಬೆಂಗಳೂರಲ್ಲಿಯೇ ಬಚ್ಚಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
For More Updates Join our WhatsApp Group :
