ಕಿರಣ್ ರಿಜಿಜು ಆರೋಪಕ್ಕೆ ತಿರುಗೇಟು, ಲೋಕಸಭಾ ಗಲಾಟೆ ವಿವಾದ.
ನವದೆಹಲಿ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಅನುಚಿತವಾಗಿ ವರ್ತಿಸಿದ್ದಾರೆ, ಅದಕ್ಕೆ ನಾನು ಪ್ರೋತ್ಸಾಹ ನೀಡಿದ್ದೇನೆ ಎಂಬ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸುಳ್ಳು ಎಂದು ತಳ್ಳಿಹಾಕಿದ್ದಾರೆ. “ನಾವು ಯಾರನ್ನೂ ನಿಂದಿಸಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ನಾವು ಯಾರನ್ನೂ ನಿಂದಿಸಿಲ್ಲ. ಸ್ಪೀಕರ್ ಕೊಠಡಿಯೊಳಗೆ ಹೋದಾಗ ಒಂದಿಬ್ಬರು ಸಂಸದರು ಉದ್ರೇಕಗೊಂಡರು. ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಈ ವೇಳೆ ನಾನು ಅವರಿಗೆ ಕುಮ್ಮಕ್ಕು ನೀಡಿದ್ದೇನೆ ಎಂಬುದು ಸುಳ್ಳು. ಆಗ ನಾನು ಮೌನವಾಗಿ ಕುಳಿತಿದ್ದೆ. ಕೊನೆಯಲ್ಲಿ, ನಾನು ಕೆಲವು ವಿಷಯಗಳನ್ನು ಸ್ಪೀಕರ್ಗೆ ಶಾಂತಿಯುತವಾಗಿ ಹೇಳಿದೆ. ಅಲ್ಲಿ ಯಾವುದೇ ಗಲಾಟೆ ನಡೆಯಲಿಲ್ಲ. ಸ್ಪೀಕರ್ ಕೂಡ ಶಾಂತಿಯಿಂದಲೇ ನಮ್ಮ ಮಾತು ಕೇಳಿಸಿಕೊಂಡರು” ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
20ರಿಂದ 25 ಕಾಂಗ್ರೆಸ್ ಸಂಸದರು ಸ್ಪೀಕರ್ ಅವರ ಕೊಠಡಿಗೆ ಪ್ರವೇಶಿಸಿ, ಅವರನ್ನು ನಿಂದಿಸಿ, ಪ್ರಧಾನಿಯವರಿಗೆ ಬೆದರಿಕೆ ಹಾಕಿದ್ದರು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿ ಹೊಸ ವಿಡಿಯೋವನ್ನು ಕೂಡ ರಿಲೀಸ್ ಮಾಡಿದ್ದರು. ಕಿರಣ್ ರಿಜಿಜು ಅವರ ಆರೋಪ ಸುಳ್ಳೆಂದು ಪ್ರಿಯಾಂಕಾ ಗಾಂಧಿ ನಿರಾಕರಿಸಿದ್ದಾರೆ.
For More Updates Join our WhatsApp Group :




