ಬೆಂಗಳೂರಿನ ದೂಪನಹಳ್ಳಿಯಲ್ಲಿ ದಾರುಣ ಘಟನೆ.
ಬೆಂಗಳೂರು : ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ ಆಸ್ತಿ ವಿವಾದವೊಂದು ವೃದ್ಧರೊಬ್ಬರs ಸಾವಿಗೆ ಕಾರಣವಾಗಿದೆ. ಬಿಎಂಟಿಸಿಯ ನಿವೃತ್ತ ಕಂಡಕ್ಟರ್ 70 ವರ್ಷದ ಮುನಿಕೃಷ್ಣಪ್ಪ ಅವರನ್ನು ಅವರ ಇಬ್ಬರು ಮಕ್ಕಳೇ ಆಸ್ತಿ ಆಸೆಗಾಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಶನಿವಾರ ರಾತ್ರಿ ದೂಪನಹಳ್ಳಿಯ ಮುತ್ತಿಯಾಲಮ್ಮ ದೇವಾಲಯದ ಬಳಿ ತಂದೆ ಮುನಿಕೃಷ್ಣಪ್ಪ ಮತ್ತು ಅವರ ಪುತ್ರರಾದ ಮೋಹನ್ ಕುಮಾರ್ ಹಾಗೂ ಗಜೇಂದ್ರ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಗ ಮೋಹನ್ ಕುಮಾರ್ ಹಾಕಿ ಸ್ಟಿಕ್ ಮತ್ತು ರಾಡ್‌ನಿಂದ ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ತೀವ್ರವಾಗಿ ರಕ್ತಸ್ರಾವಗೊಂಡು ಕುಸಿದುಬಿದ್ದ ಮುನಿಕೃಷ್ಣಪ್ಪ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಮುನಿಕೃಷ್ಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದು ಮುನಿಕೃಷ್ಣಪ್ಪ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಮಕ್ಕಳಿಗೆ ಪಾಲು ನೀಡದ ಕಾರಣ ಹಲವು ಬಾರಿ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಘಟನೆ ಸಂಬಂಧ ಹಲ್ಲೆ ನಡೆಸಿದ ಮೋಹನ್ ಕುಮಾರ್‌ನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
For More Updates Join our WhatsApp Group :




