ಸೊಸೆ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದವರು, ಶಾಲಾ ಬಸ್ಸಿನ ಪರಿಣಾಮ.
ಕೊಪ್ಪಳ : ಓವರ್ಟೇಕ್ ವೇಳೆ ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಉಪಲದಿನ್ನಿ ಬಳಿ ನಡೆದಿದೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ಲಾರಿ ಚಕ್ರಕ್ಕೆ ಸಿಲುಕಿ ಶ್ರೀನಿವಾಸ್(26) ಮತ್ತು ಸಿದ್ದನಗೌಡ(25) ಮೃತಪಟ್ಟಿದ್ದಾರೆ. ಸೊಸೆ ಬರ್ತ್ಡೇ ಮಾಡಲು ಹೋಗಿದ್ದ ಇಬ್ಬರು ದುರಂತ ಅಂತ್ಯಕಂಡಿದ್ದಾರೆ. ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಸೊಸೆ ಬರ್ತ್ಡೇ ಹಿನ್ನೆಲೆ ಸ್ನೇಹಿತ ಸಿದ್ದನಗೌಡ ಜತೆ ಶ್ರೀನಿವಾಸ್ ತೆರಳುತ್ತಿದ್ದ. ಮುಸಲಾಪುರದಿಂದ ಹಿರೇಅರಳಹಳ್ಳಿಗೆ ಬೈಕ್ನಲ್ಲಿ ಇಬ್ಬರು ತೆರಳುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಸ್ಟೀಲ್ ಕ್ವಾಯಿಲ್ ಸಾಗಿಸುತ್ತಿದ್ದ ಲಾರಿ ಓವರ್ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಲಾರಿ ಕೆಳಗಡೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮೃತರು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ನಿವಾಸಿಗಳು ಎನ್ನಲಾಗಿದೆ.
ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವು
ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ನಿನ್ನೆ ನಡೆದಿದೆ. ಗಾಜರಕೋಟ ಗ್ರಾಮದ ವಿಸ್ಡಮ್ ಶಾಲೆಯ ಪುನೀತ್ ಮೃತ ವಿದ್ಯಾರ್ಥಿ. ನಿನ್ನೆ ಶಾಲೆಯಿಂದ ಬಸ್ನಲ್ಲಿ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಪುನೀತ್, ಬಸ್ನಿಂದ ಕೆಳಗೆ ಇಳಿಯುತ್ತಿದ್ದಂತೆ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದು, ಈ ವೇಳೆ ಬಸ್ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಪುನೀತ್ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗುವಿನ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಬಸ್ ಡ್ರೈವರ್ಗೆ ಜೀವಾವಧಿ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಪೊಲೀಸರ ಮನವೊಲಿಕೆ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
For More Updates Join our WhatsApp Group :




