ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಕುಸಿತ
ಬೆಂಗಳೂರು : ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಹದಗೆಟ್ಟಿದ್ದು, ಅದರಲ್ಲೂ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ನಗರದ ಸರಾಸರಿ ಗಾಳಿಯ ಮಟ್ಟ 117 ರಿಂದ 157 ರ ನಡುವೆ ದಾಖಲಾಗಿದ್ದು, ಇದು ‘ಕಳಪೆ’ ಮತ್ತು ಕೆಲವು ಭಾಗಗಳಲ್ಲಿ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಸಿಲ್ಕ್ ಬೋರ್ಡ್, ವೈಟ್ಫೀಲ್ಡ್ ಮತ್ತು ಬಿಟಿಎಂ ಲೇಔಟ್ನಂತಹ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಿದೆ.
ಇನ್ನು ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಾಯು ಗುಣಮಟ್ಟ ಕಳಪೆಯಾಗಿದ್ದು, ಗಾಳಿಯ ಮಟ್ಟ 277 ದಾಖಲಾಗಿದೆ. ಇದು ‘ಅನಾರೋಗ್ಯಕರ’ ಹಂತ ಎಂದು ಹೇಳಲಾಗಿದೆ. ಹಾಗಾಗಿ ಶ್ವಾಸಕೋಶದ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಿದೆ. ಕರಾವಳಿ ಭಾಗದಲ್ಲೂ ವಾಯು ಗುಣಮಟ್ಟ ಕುಸಿತ ಕಂಡಿದ್ದು, ವಾಹನ ದಟ್ಟಣೆ ಮತ್ತು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ತಾಪಮಾನದ ಏರಿಳಿತ (ಬೆಳಿಗ್ಗೆ ಚಳಿ, ಮಧ್ಯಾಹ್ನ ಬಿಸಿಲು) ಮತ್ತು ವಾಯು ಮಾಲಿನ್ಯದ ಕಾರಣದಿಂದಾಗಿ ಕೆಮ್ಮು, ನೆಗಡಿ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸುವಾಗ N95 ಮಾಸ್ಕ್ ಬಳಸುವುದು ಉತ್ತಮ.ಉಸಿರಾಟದ ತೊಂದರೆ ಇರುವವರು ಮತ್ತು ಮಕ್ಕಳು ಬೆಳಿಗ್ಗೆ ಅಥವಾ ಸಂಜೆ ಹೊರಗೆ ಹೋಗುವುದನ್ನು ಕಡಿಮೆ ಮಾಡುವುದು ಸೂಕ್ತ ಹಾಗೂ ಒಣ ಹವೆಯಿರುವುದರಿಂದ ಸಾಕಷ್ಟು ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದಾರೆ. ಇನ್ನು ಈ ಗಾಳಿ ಗುಣಮಟ್ಟ ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಬದಲಾಗಬಹುದು ಎಂದು ಹೇಳಲಾಗಿದೆ. ಗಾಳಿಯಲ್ಲಿ ಪ್ರಮುಖವಾಗಿ PM2.5 ಮತ್ತು PM10 ಕಣಗಳ ಪ್ರಮಾಣ ಹೆಚ್ಚಾಗಿದೆ, ಇದು ಒಣ ಹವೆಯಿಂದಾಗಿ ಗಾಳಿಯಲ್ಲಿ ಧೂಳು ಸುಲಭವಾಗಿ ಹರಡುತ್ತದೆ.
ಪ್ರಮುಖ ಜಿಲ್ಲೆಗಳಲ್ಲಿ ವಾಯುಗುಣ ಮಟ್ಟ:
ಬೆಂಗಳೂರು-157
ಮಂಗಳೂರು-178
ಬೆಳಗಾವಿ-277
ಮೈಸೂರು-85
ಚಾಮರಾಜನಗರ – 45
ಶಿವಮೊಗ್ಗ – 187
ಬಳ್ಳಾರಿ -146
ಹಬ್ಬಳ್ಳಿ-160
ಉಡುಪಿ – 185
ವಿಜಯಪುರ -144
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
For More Updates Join our WhatsApp Group :




