ಮೋದಿ–ಟ್ರಂಪ್ ಟಿ-ಶರ್ಟ್ ಹಿಡಿದು ಘೋಷಣೆ; ಪಟಿಯಾಲ ಹೌಸ್ ಕೋರ್ಟ್ ಜಾಮೀನು ವಜಾ
ನವದೆಹಲಿ : ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ ಸಭಾಂಗಣದೊಳಗೆ ಶರ್ಟ್ ಬಿಚ್ಚಿ, ಮೋದಿ-ಟ್ರಂಪ್ ಫೋಟೋ ಇದ್ದ ಟಿ-ಶರ್ಟ್ ಹಿಡಿದುಕೊಂಡು, ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯರ್ತರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ನಾಲ್ವರನ್ನು ಇಂದು ಪಟಿಯಾಲ ಹೌಸ್ ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. ಆ ನಾಲ್ವರನ್ನೂ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ನೇಪಾಳದ ಜೆನ್ಝಡ್ ಪ್ರತಿಭಟನೆಯಿಂದ ಪ್ರೇರಿತರಾದ ಕಾಂಗ್ರೆಸ್ ಕಾರ್ಯಕರ್ತರು ಎಐ ಶೃಂಗಸಭೆಯಲ್ಲಿ ಗಲಭೆ ಸೃಷ್ಟಿಸಲು ಪಿತೂರಿ ನಡೆಸಿದ್ದರು ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. “ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ” ಎಂಬ ಸ್ಲೋಗನ್ ಹೊಂದಿರುವ ಟಿ-ಶರ್ಟ್ಗಳನ್ನು ಹೈಯಲ್ಲಿ ಹಿಡಿದು ಬೀಸುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ, ಅಲ್ಲಿ ಸೇರಿದ್ದ ಸಾವಿರಾರು ಜನರ ಗಮನ ಸೆಳೆದಿದ್ದರು. ಜಾಗತಿಕ ನಾಯಕರು ಭಾಗವಹಿಸಿದ್ದ ಈ ಶೃಂಗಸಭೆಯಲ್ಲಿ ಈ ರೀತಿಯ ಅಸಭ್ಯ ವರ್ತನೆ ತೋರಿದ್ದರಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.
ಈ ಕಾಂಗ್ರೆಸ್ ಪ್ರತಿಭಟನಾಕಾರರು ನೇಪಾಳದ ಜೆನ್ಝಡ್ ಪ್ರತಿಭಟನೆಯಿಂದ ಪ್ರೇರಿತರಾಗಿದ್ದಾರೆ. ಶೃಂಗಸಭೆಯಲ್ಲಿ ಅದೇ ರೀತಿಯ ಚಳವಳಿಯನ್ನು ನಡೆಸಲು ಬಯಸಿದ್ದರು. ಹೀಗಾಗಿ, ಬಂಧಿತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು 5 ದಿನಗಳ ಕಸ್ಟಡಿಗೆ ನೀಡುವಂತೆ ದೆಹಲಿ ಪೊಲೀಸರು ನ್ಯಾಯಾಲಯದ ಮುಂದೆ ಕೋರಿದ್ದರು. ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದಾದ ಬಳಿಕ ನ್ಯಾಯಾಲಯವು ಆರೋಪಿಗಳನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
“ಪ್ರತಿಭಟನೆ ಶಾಂತಿಯುತವಾಗಿತ್ತು. ಯಾವುದೇ ವೀಡಿಯೊಗಳಲ್ಲಿ ಹಿಂಸಾಚಾರ ಕಂಡುಬಂದಿಲ್ಲ. ಅವರೆಲ್ಲರೂ ಪದವೀಧರರು, ಸುಶಿಕ್ಷಿತರು. ರಾಜಕೀಯ ಪ್ರೇರಣೆಯಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದು ಆರೋಪಿಯ ಪರ ವಕೀಲರು ವಾದ ಮಂಡಿಸಿದ್ದರು.
For More Updates Join our WhatsApp Group :




