ಗೋಗುದ್ದು ಗ್ರಾಮದಲ್ಲಿ ದುಃಖದ ಘಟನೆ, ಕುಟುಂಬಸ್ಥರ ಆಕ್ರಂದನ.
ದಾವಣಗೆರೆ: ಕರ್ನಾಟಕದಲ್ಲಿ ಇತ್ತೀಚೆಗೆ ಕಿರಿಯ ವಯಸ್ಸಿನವರಲ್ಲಿ ಹೃದಯಾಘಾತ ಅದರಿಂದಾಗಿ ಸಾವುಗಳು ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ಜೋರಾಗಿದೆ. ಇದರ ನಡುವೆಯೇ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ 15 ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಗೋಗುದ್ದು ಗ್ರಾಮದ ಚಮನ್ಸಾಬ್ ಮತ್ತು ಫಾತಿಮಾ ದಂಪತಿಯ ಪುತ್ರ ಮುಜಾಮಿಲ್ (15) ಮೃತ ಬಾಲಕ. ಆತ ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಶಾಲೆಗೆ ರಜೆ ಹಿನ್ನೆಲೆ ಮನೆಗೆ ಬಂದಿದ್ದ ಮುಜಾಮಿಲ್ ಇಂದು ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಅಸ್ವಸ್ಥನಾಗಿ ಕುಸಿದುಬಿದ್ದಿದ್ದಾನೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ, ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯಂತೆ, ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ.
ಈ ಘಟನೆ ಗೋಗುದ್ದು ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಮಕ್ಕಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
For More Updates Join our WhatsApp Group :




