ಚಿಕ್ಕಮಗಳೂರಿನಲ್ಲಿ ಕಾಡಾನೆ ಆತಂಕ: 12 ಗ್ರಾಮಗಳಿಗೆ ನಿಷೇಧಾಜ್ಞೆ.

ಚಿಕ್ಕಮಗಳೂರಿನಲ್ಲಿ ಕಾಡಾನೆ ಆತಂಕ: 12 ಗ್ರಾಮಗಳಿಗೆ ನಿಷೇಧಾಜ್ಞೆ.

ನಿಷೇಧಾಜ್ಞೆ ಜಾರಿ, ಸಂಜೆ 4 ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚಾರ ನಿಯಂತ್ರಣ.

ಚಿಕ್ಕಮಗಳೂರು: ತಾಲೂಕಿನಲ್ಲಿ ಕಾಡಾನೆಗಳ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ತಾಲೂಕಿನ ಒಟ್ಟು 12 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಂಜೆ 4 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿಯಂತ್ರಿಸಲಾಗಿದೆ. ಈ ಸಂಬಂಧ ತಹಶೀಲ್ದಾರ್ ಆದೇಶ ಹೊರಡಿಸಿದ್ದು, ನಾಳೆವರೆಗೆ (ಫೆಬ್ರವರಿ 26)ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

ಕಾಡಾನೆ ದಾಳಿಗೆ ಒಂದೇ ವಾರದಲ್ಲಿ ಇಬ್ಬರು ಬಲಿ

ಕೆಲ ದಿನಗಳ ಹಿಂದಷ್ಟೇ ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಈ ಘಟನೆ ನಡೆದು ಒಂದು ವಾರದಲ್ಲೇ ಅದೇ ಕಾಫಿತೋಟದಲ್ಲಿ ಕಾಡಾನೆ ದಾಳಿಗೆ ಹೊಸಪೇಟೆ ಮೂಲದ ಬೋರಮ್ಮ (34)ಎಂಬ ಕಾರ್ಮಿಕ ಮಹಿಳೆಯೂ ಅಸುನೀಗಿದ್ದರು. ಈ ಘಟನೆಗಳ ಬಳಿಕ ವೇಗದಿಂದ ಸಾಗಿದ ಆನೆ ಸೆರೆ ಕಾರ್ಯಾಚರಣೆಯು ಯಶಸ್ವಿಗೊಂಡು ಕಿಲ್ಲರ್ ಸಲಗ ಸೆರೆಯಾಗಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದ್ದು, ಮುಂದೆ ಈ ರೀತಿಯ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ

ಎಲ್ಲೆಲ್ಲಿ ನಿಷೇಧಾಜ್ಞೆ ಜಾರಿ?

ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ, ವಸ್ತಾರೆ, ಮತ್ತಾವರ, ದಂಬದಹಳ್ಳಿ, ನಲ್ಲೂರು, ಕಾರೇಮನೆ, ಉಕ್ಕುಂದ, ಗಡಬನಹಳ್ಳಿ, ಜೋಳದಾಳು, ಚಿಕ್ಕೊಳಲೆ, ತಳಿಹಳ್ಳ, ಶಿರಗುಂದದಲ್ಲಿ ಜನರ ಸುರಕ್ಷತೆಗಾಗಿ ನಿಷೇಧಾಜ್ಞೆ ಹೊರಡಿಸಲಾಗಿದೆ. ವಿಶೇಷವಾಗಿ ಚಿಕ್ಕೊಳಲೆ ಅರಣ್ಯ ಪ್ರದೇಶದಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿರುವುದು ಪತ್ತೆಯಾಗಿದ್ದು, ಅವುಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಹದ್ದಿನಕಣ್ಣು ಇಟ್ಟಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *